ನವದೆಹಲಿ : ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.
ಈ ಹಿಂದೆ ವಜುಭಾಯ್ ವಾಲಾ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅವಧಿ ಮುಗಿದ ಹಿನ್ನೆಲೆ ಗೆಹ್ಲೋಟ್ ಅವರನ್ನು ನೂತನ ರಾಜ್ಯಪಾಲರಾಗಿ ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕರ್ನಾಟಕದ 19ನೇ ರಾಜ್ಯಪಾಲರಾಗಿ ಗೆಹ್ಲೋಟ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇನ್ನುಳಿದಂತೆ ಮಿಜೋರಾಂ ರಾಜ್ಯಪಾಲರಾಗಿ ಹರಿ ಬಾಬು ಕಂಭಂಪತಿ, ಮಧ್ಯಪ್ರದೇಶ ರಾಜ್ಯಪಾಲರಾಗಿ ಮಂಗುಭಾಯ್ ಚಗನ್ಭಾಯ್ ಪಟೇಲ್, ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್, ಗೋವಾ ರಾಜ್ಯಪಾಲರಾಗಿ ಪಿ.ಎಸ್.ಶ್ರೀಧರನ್ ಪಿಳ್ಳೈ, ತ್ರಿಪುರ ರಾಜ್ಯಪಾಲರಾಗಿ ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್ ರಾಜ್ಯಪಾಲರಾಗಿ ರಮೇಶ್ ಬೈಸ್ ಹಾಗೂ ಹರಿಯಾಣ ರಾಜ್ಯಪಾಲರಾಗಿ ಬಂದಾರು ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.










