ಕಳಸ : ಕರ್ನಾಟಕ ಬ್ಯಾಂಕ್ ಕಳೆದ ಸಾಲಿನಲ್ಲಿ ಸುಮಾರು 450 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದ್ದು, ಲಾಭಂಶದಲ್ಲಿ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುವುದು ತನ್ನ ಕರ್ತವ್ಯವೆಂದು ಬ್ಯಾಂಕ್ ಭಾವಿಸಿದೆ ಎಂದು ಕರ್ನಾಟಕ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರು ಹಾಗೂ ಪ್ರಾದೇಶಿಕ ಕಛೇರಿ, ಶಿವಮೊಗ್ಗದ ಮುಖ್ಯಸ್ಥರಾಗಿರುವ ಹಯವದನ ಉಪಾಧ್ಯಾಯ ಅವರು ಹೇಳಿದರು.
ಇಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಸಿಟಿವಿ ಕ್ಯಾಮೆರಾ ವವಸ್ಥೆಯನ್ನು ಚಾಲನೆಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಬ್ಯಾಂಕಿಗೆ ಕಾಲೇಜಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಆವಕಾಶ ಸಿಕ್ಕಿರುವುದು ಹರ್ಷ ತಂದಿದೆ. ಕಳಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಕರ್ನಾಟಕ ಬ್ಯಾಂಕ್ ಮಾಡಿರುವ ಸಾಮಾಜಿಕ ಅಭಿವೃದ್ದಿ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೌಲಭ್ಯವಿಲ್ಲದೆ ಬೆಳೆಯುವುದಕ್ಕೆ ಆಗುವುದಿಲ್ಲವೆಂಬ ಭ್ರಮೆಯಿಂದ ಹೊರಬರಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ಬಾಲ್ಯ ಕಳೆದರೂ ದೇಶದ ರಾಷ್ಟ್ರಪತಿಯಾದ ಅಬ್ದುಲ್ ಕಲಾಂ ಅಂತಹವರು ತಮ್ಮ ಆದರ್ಶವಾಗಿ ಭಾವಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ರೂ. 1,86,589/- ವೆಚ್ಚದಲ್ಲಿ ಕಾಲೇಜಿನ ಪ್ರತಿ ಕೊಠಡಿ, ಕಾರಿಡಾರ್ ಮತ್ತು ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಪಟ್ಟಣದ ಹೊರಬಾಗದಲ್ಲಿರುವ ಕಾಲೇಜಿನ ಸ್ವತ್ತಿನ ರಕ್ಷಣೆ ಹಾಗೂ ವಿದ್ಯಾರ್ಥಿಗಳಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸಲಿದೆ ಎಂದರು.
ಕರ್ನಾಟಕ ಬ್ಯಾಂಕಿನ ಕಳಸ ಶಾಖೆಯ ಪ್ರಬಂಧಕರಾದ ಮೂರ್ತಿ ಸಿ.ಕೆ ಅವರು ಮಾತನಾಡಿ ಕರ್ನಾಟಕ ಬ್ಯಾಂಕ್ ಬಹಳ ಹಿಂದಿನಿಂದಲೂ ಕಳಸದಂತಹ ಗ್ರಾಮೀಣ ಭಾಗದಲ್ಲಿ ಸೇವೆಯನ್ನು ನೀಡುತ್ತಾ ಬಂದಿರುವುದನ್ನು ಸ್ಮರಿಸಿದರು. ಸಿಸಿ ಟಿವಿ ಕೊಡುಗೆಯ ಸದುಪಯೋಗ ಕಾಲೇಜಿನ ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಸಿಗುವಂತವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಅವರು ಮಾತನಾಡಿ ಕಾಲೇಜಿನ ಅಭಿವೃದ್ದಿಗೆ ಕೊಡುಗೆ ನೀಡಿರುವ ದಾನಿಗಳ ಋಣವನ್ನು ವಿದ್ಯಾರ್ಥಿಗಳು ಸಮಾಜಮುಖಿ ಕೆಲಸದಲ್ಲಿ ತೊಡಗುವುದರ ಮೂಲಕ ಪೂರೈಸಬೇಕೆಂದು ರವರು ತಿಳಿಸಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ‘ಕ್ಯಾಂಪಸ್ ಆಯ್ಕೆ’ಯನ್ನು ಕಾಲೇಜಿನಲ್ಲಿ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಬೇಕೆಂದು ಹಾಗೂ ಕಾಲೇಜಿನ ಪಾರ್ಕ್ ಅಭಿವೃದ್ಧಿಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಅಗತ್ಯ ಸಹಕಾರವನ್ನು ಒದಗಿಸಲು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿಶು ಕುಮಾರ್ ಎನ್,ಸಹಾಯಕ ಪ್ರಾಧ್ಯಾಪಕರಾದ ಡಾ. ಆದಿತ್ಯ ಅಡಿಗ, ನಿವೇದಿತಾ ಎನ್, ಸೋಮಶೇಖರ್ ಸಿ.ಎನ್, ಸಂತೋಷ್ ಕೆ.ಬಿ, ಸುಧೀರ್ ಜೈನ್ ಹಾಗೂ ವಿದ್ಯಾರ್ಥಿಗಳಾದ ಫಾತಿಮಾ ಸುನೈನಾ, ಫಾತಿಮಾ ಅಶುರಾ ಇದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಸಿಟಿವಿ ಕ್ಯಾಮೆರಾ ವವಸ್ಥೆಯನ್ನು ಚಾಲನೆಗೊಳಿಸಿ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರು ಹಾಗೂ ಪ್ರಾದೇಶಿಕ ಕಛೇರಿ, ಶಿವಮೊಗ್ಗದ ಮುಖ್ಯಸ್ಥರಾಗಿರುವ ಹಯವದನ ಉಪಾಧ್ಯಾಯ ಉದ್ಘಾಟಿಸಿದರು.
Home ಸ್ಥಳಿಯ ಸುದ್ದಿ ಕಳಸ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೌಲಭ್ಯವಿಲ್ಲದೆ ಬೆಳೆಯುವುದಕ್ಕೆ ಆಗುವುದಿಲ್ಲವೆಂಬ ಭ್ರಮೆಯಿಂದ ಹೊರಬರಬೇಕು-ಹಯವದನ.










