ಕಳಸ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಗೆಲುವು ನಮ್ಮದಾಗಲಿಲ್ಲ. ಮುಂದೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರು ಹೇಳಿದರು.
ಕಳಸದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮತ್ತು ಜಯಗಳಿಸಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಬಲತುಂಬಿಸುವ ಕೆಲಸ ನಮ್ಮದಾಗಬೇಕಿತ್ತು. ಆದರೆ ಅದು ಆಗಲಿಲ್ಲ. ನಮ್ಮಿಂದಲೂ ತಪ್ಪಾಗಿದೆ. ಆದ್ದರಿಂದ ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ. ಜೆಡಿಎಸ್ ಪಕ್ಷದ ಕೊಡುಗೆ ಕಳಸಕ್ಕೆ ಬಹಳಷ್ಟಿದೆ ಆದರೆ ಮತದಾರರು ಅದನ್ನು ನೆನಪಿಟ್ಟುಕೊಳ್ಳಲಿಲ್ಲ ಎಂದು ಹೇಳಿದರು.
ಜೆಡಿಎಸ್ ಹಿರಿಯ ನಾಯಕ ಜಿ.ಕೆ.ಮಂಜಪ್ಪಯ್ಯ ಅವರು ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿದ್ದಾರೆ. ಇನಾಂ ಭೂಮಿ ವಿಚಾರದಲ್ಲಿ ರಾಜ್ಯ ನಾಯಕರುಗಳು ಬಂದು ರಸ್ತೆಯಲ್ಲಿ ಧರಣಿ ಕುಳಿತು ಇಲ್ಲಿಯ ರೈತರನ್ನು ಕಾಪಾಡಿದ್ದಾರೆ. ಹೊನ್ನೇಕಾಡು ಕುಡಿಯುವ ನೀರಿನ ಯೋಜನೆಗೆ ಜೆಡಿಎಸ್ ಪಕ್ಷದ ಕೊಡುಗೆ ಬಹಳಷ್ಟಿದೆ. ಜೆಡಿಎಸ್ ಪಕ್ಷ ಅಧಿಕಾರ ಇಲ್ಲದಿದ್ದರೂ ಊರಿನ ಸಮಸ್ಯೆ ಬಂದಾಗ ಅದನ್ನು ಪರಿಹರಿಸಿದೆ. ಹಲವಾರು ಅಭಿವೃದ್ಧಿ ಕೆಲಸದಲ್ಲಿ ಮುಂಚೂಣಿಯಲ್ಲಿದೆ. ಊರಿನ ಅಭಿವೃದ್ಧಿಗಾಗಿ ಶ್ರಮಿಸಿದ್ದ ಪಕ್ಷವನ್ನು ಜನ ನಿರೀಕ್ಷಿತ ಮಟ್ಟದಲ್ಲಿ ಬೆಂಬಲಿಸಿಲ್ಲ ಅನ್ನುವ ನೋವು ಇದೆ. ಗೆದ್ದ ಅಭ್ಯರ್ಥಿಗಳು ಮುಂದಿನ ಐದು ವರ್ಷಗಳ ಕಾಲ ಊರಿನ ಅಭಿವೃದ್ಧಿಗೆ ಸಮಯ ಮೀಸಲಿಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ರತ್ನಾಕರ, ಕಾರ್ಯದರ್ಶಿ ಬ್ರಹ್ಮದೇವ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ರಫೀಕ್, ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಮುಖಂಡರಾದ ಆಶಾಲತಾ ಜೈನ್, ರವಿರೈ, ಅನಿಲ್ ಡಿಸೋಜಾ ಇದ್ದರು.
Home ಸ್ಥಳಿಯ ಸುದ್ದಿ ಕಳಸ : ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು : ಬಿ.ಬಿ.ನಿಂಗಯ್ಯ.










