ಕಳಸ: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಕಳೆದರಡು ದಿನಗಳಿಂದ ಚಿರತೆಯೊಂದು ಕಂಡು ಬಂದಿದ್ದು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ.
ಬುಧವಾರದ ರಾತ್ರಿ ಹೊಸೂರಿನ ರಸ್ತೆ ಬಳಿಯೇ ಜಾನುವಾರೊಂದನ್ನು ರಾತ್ರಿ ಹಿಡಿದು ಅರ್ಧ ಬಾಗವನ್ನು ತಿಂದು ಹಾಕಿತ್ತು.ಬೆಳಿಗ್ಗೆ ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ಧಿ ಮುಟ್ಟಿಸಿದ್ದರು.ಗುರುವಾರದ ರಾತ್ರಿ ಚಿರತೆಯು ಮತ್ತದೇ ಸ್ಥಳಕ್ಕೆ ಬರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ.ಗ್ರಾಮಸ್ಥರು ಬೊಬ್ಬೆ ಹಾಕಿದಾಗ ಚಿರತೆಯು ಓಡಿ ಹೋಗಿದೆ.ಆದರೆ ಶುಕ್ರವಾರ ಬೆಳಗ್ಗಿನ ಜಾವ ಇನ್ನೊಂದು ಜಾನುವಾರೊಂದನ್ನು ಅಟ್ಟಾಡಿಸಿಕೊಂಡು ಬಂದು ಹಿಡಿದಿದೆ.ಜಾನುವಾರಿನ ಆಕ್ರಂದನಕ್ಕೆ ಗ್ರಾಮಸ್ಥರು ಓಡಿ ಬಂದಾಗ ಚಿರತೆ ದನವನ್ನು ಬಿಟ್ಟು ಹೋಗಿದೆ.
ನೂರಾರು ಮನೆಗಳು ಇರುವ ಪ್ರದೇಶಕ್ಕೆ ಚಿರತೆಯು ಬಂದು ದಾಳಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರ ಬರಲು ಹೆದರಿಕೊಳ್ಳುವಂತಾಗಿದೆ.ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಬಹುತೇಕ ಕೃಷಿಕರು ಈ ಕಾರ್ಯದಲ್ಲಿ ತೊಡಗಿದ್ದಾರೆ.ಆದರೆ ಗ್ರಾಮದಲ್ಲಿ ಚಿರತೆ ಇದೆ ಎಂದು ಗೊತ್ತಾಗಿರುವುದರಿಂದ ಯಾರೂ ಕೂಡ ಕಾಫಿ ಕೊಯ್ಯಲು ಜನ ಬರುತ್ತಿಲ್ಲ.ನಮಗೂ ತೋಟಕ್ಕೆ ಹೋಗಲು ಹೆದರಿಕೆ ಆಗುತ್ತಿದೆ ಅರಣ್ಯ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರಾದ ಬೋಜೇಗೌಡ,ನಟೇಶ ಹೇಳುತ್ತಾರೆ.
ಹೊಸೂರಿನಲ್ಲಿ ಚಿರತೆ ಬಂದಿರುವ ಕುರುಹುಗಳು ಇವೆ.ಒಂದು ಜಾನುವಾರನ್ನು ಸಾಯಿಸಿದೆ.ಇನ್ನೊಂದನ್ನು ಹಿಡಿದು ಬಿಟ್ಟು ಹೋಗಿದೆ.ಗ್ರಾಮಸ್ಥರು ಏನು ಭಯ ಪಡುವ ಅಗತ್ಯ ಇಲ್ಲ.ಈಗಾಗಲೇ ಚಿರತೆಯನ್ನು ಹಿಡಿಯಲು ಬೋನು ತರಿಸುವ ವ್ಯವಸ್ಥೆ ಮಾಡಿದ್ದೇವೆ.ಮತ್ತು ರಾತ್ರಿ ಕಾವಲು ಕಾಯುವ ವ್ಯವಸ್ಥೆಯನ್ನು ಮಾಡುತ್ತೇವೆ.
- ಚೇತನ್ ಗಸ್ತಿ,ಕಳಸ ಅರಣ್ಯ ಇಲಾಖಾ ಅಧಿಕಾರಿ.










