ಕಾಂಗ್ರೆಸ್‍ನವರು ಅಧಿಕಾರಕ್ಕೆ ಬರಲು ತಿರುಕನ ಕನಸು ಕಾಣ್ತಿದ್ದಾರೆ : ಬಿಎಸ್‍ವೈ.

63
firstsuddi

ದಾವಣಗೆರೆ : ಕಾಂಗ್ರೆಸ್ ನವರು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಯಾವಾಗಲೂ ಅಧಿಕಾರಕ್ಕೆ ಬರೋದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಭವಿಷ್ಯ ನುಡಿದರು.

ಜಿಲ್ಲೆಯ ಜಗಳೂರು ಪಟ್ಟಣದ ರಂಗ ಮಂದಿರದ ಮೈದಾನದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 145ಕ್ಕೂ ಹೆಚ್ಚು ಸೀಟ್ ಗೆದ್ದು ಅಧಿಕಾರ ಹಿಡಿಯುವುದು ಖಚಿತ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರುವುದು. ಆದರೆ ಈ ಕಾಂಗ್ರೆಸ್ ನವರು ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರು ಯಾವಾಗಲೂ ಅಧಿಕಾರಕ್ಕೆ ಬರೋದಿಲ್ಲ. ಕೇವಲ ತಿರುಕನ ಕನಸಾಗಿ ಉಳಿಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಹೆಂಡ, ಹಣದ ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ನಾವು ರಾಜ್ಯದ ಎಲ್ಲಾ ಕಡೆ ಪ್ರವಾಸ ಕೈಗೊಂಡಿದ್ದೇವೆ. ಅಲ್ಲಿನ ವಾತಾವರಣವನ್ನು ಕೂಡ ಗಮನಿಸಿದ್ದೇವೆ. ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸುತ್ತಿದ್ದಾರೆ. ಅಲ್ಲದೆ ಜಗಳೂರು ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಎಸ್ ವಿ ರಾಮಚಂದ್ರಪ್ಪ ಅವರನ್ನು ಮತ್ತೆ 50 ಸಾವಿರ ಅಂತರದಲ್ಲಿ ಗೆಲ್ಲಿಸಬೇಕು ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಮಚಂದ್ರಪ್ಪಗೆ ಟಿಕೆಟ್ ಫಿಕ್ಸ್ ಎಂಬ ಸಂದೇಶವನ್ನು ಕ್ಷೇತ್ರದ ಜನತೆಗೆ ರವಾನಿಸಿದರು.