ಕಾಫಿಯ ನಿಯಮಿತ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ : ಜೆ.ಪಿ.ಕೃಷ್ಣೇಗೌಡ.

86
firstsuddi

ಚಿಕ್ಕಮಗಳೂರು : ಕಾಫಿಯ ನಿಯಮಿತ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಮಕ್ಕಳ ತಜ್ಞ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ|ಜೆ.ಪಿ.ಕೃಷ್ಣೇಗೌಡ ಹೇಳಿದರು.

ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾಫಿ ತಳಿಯ ನೂತನ ಆವಿಷ್ಕಾರ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಫಿಯ ಸೇವನೆ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂಬುದು ಕೇವಲ ನಮ್ಮ ಕಲ್ಪನೆ. ಕಾಫಿಯನ್ನು 350 ವರ್ಷಗಳಿಂದ ನಮ್ಮ ಜನ ಕುಡಿಯುತ್ತಿದ್ದಾರೆ. ಅವರಿಗೆ ಕಾಫಿ ಸೇವನೆಯಿಂದ ಇದುವರೆಗೆ ಯಾವುದೇ ರೋಗ ಬಂದಿರುವ ಉದಾಹರಣೆಗಳು ಇಲ್ಲ. ಕಾಫಿ ಸೇವನೆಯಿಂದ ರೋಗಗಳು ಬರುವುದಿಲ್ಲ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದರು.

ಕಾಫಿಯನ್ನು ಬೀಜದಿಂದ ತಯಾರಿಸುವುದರಿಂದ ಅದು ಆರ್ಯುವೇದ ಪಾನಿಯಾವಾಗಿದೆ. ಕಾಫಿಯ ಸೇವನೆಯಿಂದ ಬಹಳಷ್ಟು ಲಾಭಗಳಿವೆ ಎಂದು ತಿಳಿಸಿದರು.

ಕಾಫಿಯ ಅತಿಯಾದ ಸೇವನೆ ಒಳ್ಳೆಯದಲ್ಲ ಆದರೆ, ನಿಯಮಿತವಾಗಿ ಕುಡಿಯುವುದರಿಂದ ಬುದ್ಧಿ ಚುರುಕಾಗುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ. ಹೃದಯದ ಕಾಯಿಲೆಗಳು ಬರುವ ಸಂಭವ ಕಡಿಮೆಯಾಗುತ್ತದೆ. ಕರುಳಿಗೆ ಸಂಬಂಧಿಸಿದ ಕ್ಯಾನ್ಸರ್ ರೋಗಗಳು ಬರುವುದಿಲ್ಲ ಎಂದು ಹೇಳಿದರು.

ಮಕ್ಕಳಿಗೆ ಕಾಫಿಯನ್ನು 6 ತಿಂಗಳ ನಂತರ ಧಾರಾಳವಾಗಿ ಕೊಡಬಹುದು. ಅದರಿಂದ ಅವರ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಬೆಳೆಗಾರರು ಗುಣಮಟ್ಟದ ಕಾಫಿ ಬೆಳೆಯಲು ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಮಹೇಶ್ ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾಫಿಮಂಡಳಿ ನಿರ್ದೇಶಕ ಎಂ.ಶ್ರೀನಿವಾಸ್, ಬೆಳೆಗಾರರಿಗೆ ನೂತನ ಕಾಫಿ ತಳಿಗಳ ಆವಿಷ್ಕಾರದ ಕುರಿತು ವಿವರಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಎಂ.ಶಾಂತರಾಮ್ ಹೆಗಡೆ, ಜಂಟಿ ಕಾರ್ಯದರ್ಶಿ ಜೆ.ಎಸ್.ಶಿವಣ್ಣ, ನಿರ್ದೇಶಕರಾದ ಡಾ|ವಿನಾಯಕ, ಗೌತಮ್ ಚಂದ್, ಎ.ಕೆ.ಮಂಜಪ್ಪ, ಜಿತೇಂದ್ರ, ದೇವಪ್ರಸಾದ್, ಕುಮಾರಸ್ವಾಮಿ, ಭೀಮಾಚಾರ್, ಶ್ರೀಕಾಂತ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಉಪಸ್ಥಿತರಿದ್ದರು.