ಬರ್ಮಿಂಗ್ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್ ನ ಗುಂಪು ಹಂತದ ಬ್ಯಾಡ್ಮಿಂಟನ್ ನಲ್ಲಿ ಭಾರತ ಫೈನಲ್ಸ್ ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.
ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಮಲೇಷ್ಯಾದ ಟೆಂಗ್ ಫಾಂಗ್ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಎದುರಿಸಿತು. ಕಠಿಣ ಸವಾಲು ಒಡ್ಡಿದ ಚಿಯಾ ಸೋಹ್ ಜೋಡಿ ಭಾರತದ ಎದುರು 21-18, 21-15 ನೇರ ಸೆಟ್ ಗಳಿಂದ ಪಂದ್ಯ ಜಯಿಸಿತು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ ನಡೆದ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿವಿ ಸಿಂಧು, ಮಲೇಷ್ಯಾದ ಗೋಹ್ ಜಿನ್ ವೀ ಸವಾಲು ಎದುರಿಸಿದರು. 22-20, 21-17 ನೇರ ಸೆಟ್ ಗಳಿಂದ ಸಿಂಧು ಜಯಿಸುವ ಮೂಲಕ 1-1 ರಲ್ಲಿ ಸಮಬಲ ಮಾಡಿದರು.
ಪುರುಷರ ಸಿಂಗಲ್ಸ್ ನಲ್ಲಿ ವಿಶ್ವದ 14 ನೇ ಶ್ರೇಯಾಂಕಿತ, ಭಾರತದ ಅಗ್ರ ಶೆಟ್ಲರ್ ಕಿಡಂಬಿ ಶ್ರೀಕಾಂತ್ ತ್ಸೆ ಯಾಂಗ್ ಜಿ ವಿರುದ್ಧ ಸೋತು ಶಾಕ್ ನೀಡಿದರು. 21-19, 6-21, 21-16 ಮೂರು ಸೆಟ್ ಗಳಲ್ಲಿ ನಡೆದ ಆಟದಲ್ಲಿ ಯಾಂಗ್ ಜಿ ಗೆಲುವು ಸಾಧಿಸಿದರು. ಇದು ಭಾರತದ ಹಿನ್ನಡೆ ಕಾರಣವಾಗಿ 2-1 ರಿಂದ ಮಲೇಷ್ಯಾ ಮುನ್ನಡೆ ಪಡೆಯಿತು.
ನಿರ್ಣಾಯಕ ಪಂದ್ಯವಾದ ಮಹಿಳೆಯರ ಮಿಶ್ರ ಡಬಲ್ಸ್ ನಲ್ಲಿ ವಿಶ್ವದ 11ನೇ ಶ್ರೇಯಾಂಕದ ಮಲೇಷ್ಯಾ ಜೋಡಿಯಾದ ಥಿನಾ ಮುರಳೀಧರನ್ ಮತ್ತು ಕೂಂಗ್ ಲೆ ಪರ್ಲಿ ತಾನ್ ಭಾರತದ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ವಿರುದ್ಧ 21-18, 21-17 ರ ನೇರ ಸೆಟ್ ಗಳಿಂದ ಸುಲಭ ಜಯ ಸಾಧಿಸಿದರು. ಈ ಮೂಲಕ ತಂಡ 1-3 ರ ಅಂತರದಲ್ಲಿ ಚಿನ್ನಕ್ಕೆ ಕೊರಳೊಡ್ಡಿತು. ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಇದುವರೆಗೂ 5 ಚಿನ್ನ, 5 ಬೆಳ್ಳಿ, 3 ಕಂಚು ಸೇರಿ ಒಟ್ಟು 12 ಪದಕ ಜಯಿಸಿದೆ.










