ಕಾರು, ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ತೈಲ ಟ್ಯಾಂಕರ್- ಸ್ಥಳದಲ್ಲೇ ನಾಲ್ವರು ಸಾವು…

66
firstsuddi

ಹರಿಯಾಣ: ದೆಹಲಿ-ಜೈಪುರ ಹೆದ್ದಾರಿಯ ಗುರುಗ್ರಾಮ್‌ನ ಸಿದ್ರಾವಲಿ ಗ್ರಾಮದ ಬಳಿ ತೈಲ ಟ್ಯಾಂಕರ್, ಕಾರು ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬಿಲಾಸ್ಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ವಿನೋದ್ ಕುಮಾರ್ ಹೇಳಿರುವ ಪ್ರಕಾರ, ಜೈಪುರದಿಂದ ಬರುತ್ತಿದ್ದ ತೈಲ ಟ್ಯಾಂಕರ್ ಡಿವೈಡರ್​​ಗೆ ಡಿಕ್ಕಿ ಹೊಡೆದು ಕಾರಿಗೆ ಡಿಕ್ಕಿ ಹೊಡೆದಿದೆ. ಇನ್ನು ಈ ಕಾರು ಜೈಪುರಕ್ಕೆ ಪ್ರಯಾಣಿಸುತ್ತಿತ್ತು ಎಂದು ಹೇಳಲಾಗಿದೆ. ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಸಿಎನ್‌ಜಿ ಸಿಲಿಂಡರ್ ಸ್ಫೋಟಗೊಂಡು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಹಿಂದೆ ಬರುತ್ತಿದ್ದ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದು, ವ್ಯಾನ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತ ಸ್ಥಳದಿಂದ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ, ಇದೀಗ ಆತನ ಪತ್ತೆಗಾಗಿ ಕಾರ್ಯಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಿಂದ ಸಾವನ್ನಪ್ಪಿರುವವರನ್ನು ಸ್ಥಳೀಯ ಆಸ್ಪತ್ರೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವಿಚಾರದ ಬಗ್ಗೆ ನಾಲ್ಕು ಜನರ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.