ದಕ್ಷಿಣ ಕನ್ನಡ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಕಾರು ಡಿಕ್ಕಿಯಾಗಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರ ಮೃತಪಟ್ಟಿದ್ದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಕೇರಳ ರಾಜ್ಯದ ಕಾಸರಗೋಡಿನ ನಿವಾಸಿ ಪ್ರೀತಿಕಾ ಶೆಟ್ಟಿ (21) ಎಂದು ಗುರುತಿಸಲಾಗಿದ್ದು, ಗಾಯಾಳು ಬೈಕ್ ಸವಾರನನ್ನು ಬಂಟ್ವಾಳ ತಾಲ್ಲೂಕು ಅರಂತೋಡಿ ಬಾಳೆಪುಣಿ ನಿವಾಸಿ ಮನ್ವಿತ್ ರಾಜ್ ಶೆಟ್ಟಿ (21)ಎಂದು ಗುರುತಿಸಲಾಗಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಗೆ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬೈಕ್ ನ್ನು ಕಾರು ದೂಡಿಕೊಂಡು ಹೋಗಿದ್ದು ಬೈಕ್ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಸಹಸವಾರ ಪ್ರೀತಿಕಾ ಶೆಟ್ಟಿ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದಾರೆ.
ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.










