ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ.

63
firstsuddi

ಲಕ್ನೋ : ಗಂಗಾ ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

ಕಾಶಿ ವಿಶ್ವನಾಥ್ ಕಾರಿಡಾರ್ ನ್ನು ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಮ್ಮ ಪುಣ್ಯವಾಗಿದೆ. ಕಾಲಭೈರವನ ದರ್ಶನ ಪಡೆದು ಬಂದಿದ್ದೇನೆ. ಕಾಶಿಯ ದರ್ಶನದಿಂದ ಸಕಲ ಸಂಕಷ್ಟ ದೂರವಾಗುತ್ತದೆ. ಈ ಕಾರ್ಯಕ್ರಮವು ನನಗೆ ಸಂತೋಷವನ್ನು ತಂದಿದೆ. ಕಣ್ಮರೆಯಾಗಿರುವ ಮಂದಿರಗಳನ್ನು ಮರುಸ್ಥಾಪನೆ ಮಾಡಿದ್ದೇವೆ. ಕಾಶಿ ನಮ್ಮ ಆದ್ಯಾತ್ಮಿಕತೆಯ ಪ್ರತೀಕವಾಗಿದೆ. ಈ ಪರಿಸರದಲ್ಲಿ ದೈವಿಕ ವಾತಾವರಣದೆ. ಇಂದು ಶಿವನ ಪ್ರಿಯ ವಾರವಾಗಿದ್ದು, ಇಂದೇ ಕಾರಿಡಾರ್ ಲೋಕಾರ್ಪಣೆಗೊಂಡಿದೆ. ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು ಎಂದರು.

ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿಯವರು ಕಾಲ ಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಲಕಾನಂದ ಕ್ರೂಸ್ ನಲ್ಲಿ ಲಲಿತಾ ಘಾಟ್ ಗೆ ತೆರಳಿ ಅಲ್ಲಿ ಕಾವಿಧಾರಿಯಾಗಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಲ್ಲಿ ಅಘ್ರ್ಯ ಅರ್ಪಿಸಿ ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದರು.

ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ:
ಕಾಶಿ ವಿಶ್ವನಾಥ ಕಾರಿಡಾರ್ ವಿಶ್ವನಾಥ ದೇಗುಲ ಮತ್ತು ಪವಿತ್ರ ಗಂಗಾ ನದಿಯನ್ನು ನೇರವಾಗಿ ಸಂಪರ್ಕಿಸುತ್ತದೆ. ಈ ಮೊದಲು ದೇಗುಲ ಮತ್ತು ಪವಿತ್ರ ಗಂಗಾ ನದಿಗೆ ನೇರವಾದ ಸಂಪರ್ಕವಿರಲಿಲ್ಲ. ದೇಗುಲದ ಮೂರು ದಿಕ್ಕುಗಳಲ್ಲಿ ಮನೆಗಳು, ಕಟ್ಟಡಗಳು, ಆವರಿಸಿದ್ದವು. ಇದೀಗ ಕಿಕ್ಕಿರಿದ ಪ್ರದೇಶ, ಜನಸಂದಣಿಯಿಂದ ಯಾವುದೇ ಅಡೆತಡೆಗಳಿಲ್ಲದೆ ಗಂಗೆಯ ಲಲಿತಾ ಘಾಟ್ಗೆ ಭಕ್ತರು ಮಂದಿರದಿಂದ ಭೇಟಿ ನೀಡಬಹುದು. ದೇಗುಲದಲ್ಲಿ ನಿಂತೇ ಪ್ರಸಿದ್ಧ ಗಂಗಾರತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಈ ಕಾರಿಡಾರ್ನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಮೂರು ಕಡೆ ಕಟ್ಟಡಗಳಿಂದ ಆವೃತವಾಗಿದ್ದ ದೇವಾಲಯದ ಸಂಕೀರ್ಣದ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ. ಸುಮಾರು 399 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾರಿಡಾರ್ ಇದಾಗಿದೆ. 2019ರ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಯೋಜನೆಯು ದೇವಾಲಯದ ಆವರಣ, ವಾರಣಾಸಿ ಸಿಟಿ ಗ್ಯಾಲರಿ, ಮ್ಯೂಸಿಯಂ, ವಿವಿಧೋದ್ದೇಶದ ಆಡಿಟೋರಿಯಂಗಳು, ಸಭಾಂಗಣ, ಭಕ್ತರ ಸೌಲಭ್ಯ ಕೇಂದ್ರ, ಸಾರ್ವಜನಿಕ ಸೌಕರ್ಯ, ಮೋಕ್ಷ ಗೃಹ, ಗೋಡೋವ್ಲಿಯಾ ಗೇಟ್, ಅರ್ಚಕರು ಮತ್ತು ಸೇವಾದಾರರಿಗೆ ಆಶ್ರಯ, ಆಧ್ಯಾತ್ಮಿಕ ಪುಸ್ತಕಗಳಿಗೆ ಸ್ಥಳ ಮತ್ತು ಇತರ ಕಾಮಗಾರಿ ಒಳಗೊಂಡಿದೆ. ಸುಮಾರು 24 ಕಟ್ಟಡಗಳು ನಿರ್ಮಾಣಗೊಂಡಿವೆ. ಪ್ರಮುಖವಾಗಿ ಕಟ್ಟಡದ ಗೋಡೆಗಳ ಮೇಲೆ ಶ್ಲೋಕ, ಸ್ತೋತ್ರ ಕೆತ್ತಲಾಗಿದೆ.