ಕಿವೀಸ್ ಬೌಲಿಂಗ್ ದಾಳಿಗೆ ಭಾರತ ತತ್ತರ; 46ಕ್ಕೆ ಆಲೌಟ್, ತವರಿನಲ್ಲಿ ಮತ್ತೊಂದು ಕಳಪೆ ದಾಖಲೆ.

29

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 46ರನ್‍ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ 3ನೇ ಬಾರಿಗೆ ಅಲ್ಪಮೊತ್ತಕ್ಕೆ ಆಲೌಟ್ ಆಗಿ ಕಳಪೆ ದಾಖಲೆ ಬರೆಯಿತು. ಇದಕ್ಕೂ ಮೊದಲು 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್, 1974ರಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್‍ಗಳಿಗೆ ಆಲೌಟ್ ಆಗಿತ್ತು.
ಈ ಪಂದ್ಯದಲ್ಲಿ ಭಾರತದ ಐವರು ಆಟಗಾರರು ಯಾವುದೇ ರನ್ ಗಳಿಸದೇ ಡಕ್‍ಔಟ್ ಆಗಿದ್ದಾರೆ. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಅಶ್ವಿನ್ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇದರೊಂದಿಗೆ ತವರಿನಲ್ಲಿ ನಡೆದ ಪಂದ್ಯದಲ್ಲಿ ಐವರು ಬ್ಯಾಟರ್‌ಗಳು ಶೂನ್ಯ ಸುತ್ತಿದ್ದು ಇದೇ ಮೊದಲ ಬಾರಿಗೆ. ಉಳಿದಂತೆ ಭಾರತದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಸಿಡಿಸಲು ಸಾಧ್ಯವಾಗಿಲ್ಲ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 2 ರನ್‍ಗಳಿಗೆ ನಿರ್ಗಮಿಸಿದರೇ, ಜೈಸ್ವಾಲ್ (13), ಪಂತ್ (20) ಕೂಡ ಅತ್ಯಲ್ಪಮೊತ್ತಕ್ಕೆ ಕ್ರೀಸ್ ತೊರೆದರು. ಆರಂಭದಲ್ಲೆ ಭಾರತೀಯ ಬೌಲರ್‍ಗಳಿಗೆ ಕಡಿವಾಣ ಹಾಕುವಲ್ಲಿ ಕಿವೀಸ್ ಬ್ಯಾಟರ್‌ಗಳು ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್ ಪರ ಮ್ಯಾತ್ ಹೆನ್ರಿ 5 ವಿಕೆಟ್ ಕಬಳಿಸಿದರೆ, ವಿಲಿಯಮ್ ಓರೌಕಿ 4 ಮತ್ತು ಟಿಮ್ ಸೌಥಿ 1 ವಿಕೆಟ್ ಪಡೆದರು.