ಕುಟುಂಬದ ವಿರೋಧದ ನಡುವೆ ಅಂತರ್ಜಾತಿ ವಿವಾಹ- ಪೊಲೀಸರ ರಕ್ಷಣೆ ಕೋರಿದ ಪ್ರೇಮಿಗಳು…

79
firstsuddi

ಚಿಕ್ಕಬಳ್ಳಾಪುರ: ಕುಟುಂಬದ ವಿರೋಧದ ನಡುವೆ ಪ್ರೇಮವಿವಾಹವಾದ ಜೋಡಿ ಪೊಲೀಸರ ರಕ್ಷಣೆ ಕೋರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ನಿವಾಸಿ ಭಾನುಶ್ರೀ, ಕಾಮಶೆಟ್ಟಿಹಳ್ಳಿ ನಿವಾಸಿ ಮಧುಸೂದನ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅನ್ಯ ಕೋಮಿನ ಯುವಕನ ಜೊತೆಗಿನ ಪ್ರೀತಿ ಹಾಗೂ ಮದುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೇರೊಂದು ಮದುವೆಗೆ ತಯಾರಿ ನಡೆಸಿದರು. ಹೀಗಾಗಿ ಮನೆಯಿಂದ ಹೊರ ಬಂದಿರೋ ಭಾನುಶ್ರೀ ಈಗ ಮಧುಸೂದನ್ ಜೊತೆ ವಿವಾಹವಾಗಿದ್ದಾರೆ. ತನಗೆ ತನ್ನ ತಂದೆ ತಾಯಿಯಿಂದ ತೊಂದರೆ ಆಗಬಹುದು. ನಮಗೆ ರಕ್ಷಣೆ ನೀಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಭಾನುಶ್ರೀ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರೆ ಇತ್ತ ಮಧುಸೂದನ್ ಮನೆಯವರು ಆಗಿದ್ದು ಆಗೋಯ್ತು ಮದುವೆ ಆಗಿದೆ ಅಂತ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ ಈಗ ಭಾನುಶ್ರೀ ಕಡೆಯವರು ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿ ತೊಂದರೆ ಕೊಡುತ್ತಿದ್ದಾರೆ ಹಾಗಾಗಿ ಸೂಕ್ತ ಪೊಲೀಸ್ ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗುಡಿಬಂಡೆ ಪೊಲೀಸ್ ಠಾಣೆ ಎದುರೇ ಕೂಗಾಟ ರಂಪಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಪೊಲೀಸರ ಮೇಲೆಯೇ ವಾಗ್ವಾದಕ್ಕಿಳಿದಿದು ಯುವತಿಯನ್ನ ತಮ್ಮೊಂದಿಗೆ ಕಳಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆದ ವೇಳೆ ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ಯುವತಿ ಹೇಳಿಕೆ ಪಡೆದ ನಂತರ ಪೊಲೀಸರು ವಿರೋಧ ವ್ಯಕ್ತವಾದರೂ ಯುವಕನೊಂದಿಗೆ ಕಳಿಸಿದರು. ಕೊನೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಪ್ರೇಮಿಗಳನ್ನು ಕಳುಹಿಸಿ ಕೊಡಲಾಯಿತು.

ಭಾನುಶ್ರೀ ಮನೆಯವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ರಾಜೀ ಸಂಧಾನ ನಡೆದಿದ್ದು ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.