ಕುರುಬ ಸಮಾಜ ಅಭಿವೃದ್ಧಿಯಾಗಬೇಕಾದರೆ, ಆ ಸಮುದಾಯದ ಜನ ಒಗ್ಗೂಡಬೇಕು: ರೇಖಾ ಹುಲಿಯಪ್ಪಗೌಡ.

114
firstsuddi

ಚಿಕ್ಕಮಗಳೂರು: ಕುರುಬ ಸಮಾಜ ಅಭಿವೃದ್ಧಿಯಾಗಬೇಕಾದರೆ, ಆ ಸಮುದಾಯದ ಜನ ಒಗ್ಗೂಡಬೇಕು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.

ಜಿಲ್ಲಾ ಕನಕ ನೌಕರರ ಸಂಘ ನಗರದ ಬೀಕನಹಳ್ಳಿ ರಸ್ತೆಯ ವಿದ್ಯಾ ಭವನದಲ್ಲಿ ನಿನ್ನೆ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜನಪ್ರತಿನಿಧಿಗಳು ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಆ ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು. ಆ ನಿಟ್ಟಿನಲ್ಲಿ ಕುರುಬ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದರು.

ತಮ್ಮ ಜವಾಬ್ದಾರಿಯನ್ನು ಬೇಗ ಕಳೆದುಕೊಳ್ಳಬೇಕು ಎಂದು ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡದೆ, ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಬೇಕು. ನಂತರ ಅವರಿಗೆ ಮದುವೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ ಸಮಾಜ ಕುರುಬ ಸಮಾಜ. ಅದು ಜಗತ್ತಿನ ಎಲ್ಲಾ ದೇಶಗಳಲ್ಲೂ ಇದೆ. ಅಮೆರಿಕಾದಲ್ಲೂ ಕನಕ ಬಳಗ, ಕನಕ ಸಂಘವಿದೆ ಎಂದರು.

ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದು ಕುರುಬ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಜಾತಿ ಹೇಳಿಕೊಳ್ಳಲು ಒಂದು ಕಾಲದಲ್ಲಿ ಹಿಂಜರಿಯುತ್ತಿದ್ದ ಸಮುದಾಯದವರು. ಇಂದು ನಾನು ಕುರುಬ ಎಂದು ಎದೆತಟ್ಟಿ ಹೇಳುವಂತಾಗಿದೆ ಎಂದು ತಿಳಿಸಿದರು.

ಕುರುಬ ಸಮುದಾಯ ಇನ್ನೂ ಹೆಚ್ಚು ಬೆಳೆಯಬೇಕಾದರೆ, ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು. ಕುರುಬ ಸಮುದಾಯದ ಮಕ್ಕಳು ಐಎಎಸ್, ಐಪಿಎಸ್ ಇಂಜಿನಿಯರ್‌ಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಹೆಚ್.ಪ್ರಹ್ಲಾದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕುರುಬ ಸಮಾಜದ ಜನಪ್ರತಿನಿಧಿಗಳು ಮತ್ತು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್, ಡಿ.ಡಿ.ಪಿ. ಐಜಿ. ರಂಗನಾಥ ಸ್ವಾಮಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎ.ಗೋಪಾಲಕೃಷ್ಣ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ವೈ.ಸೋಮಶೇಖರ್, ಅಬಕಾರಿ ಇಲಾಖೆ ಉಪ ಅಧೀಕ್ಷಕ ಸಂತೋಷ್, ಕೃಷಿ ಇಲಾಖೆ ಉಪನಿರ್ದೇಶಕ ಲೋಕೇಶ್, ನಗರಸಭಾ ಸದಸ್ಯರಾದ ಸುಜಾತ, ಇಂದ್ರಮ್ಮ, ಹಾಲಪ್ಪ, ಎಲ್.ಸಿ.ಪುಟ್ಟಸ್ವಾಮಿ, ಚಂದ್ರೇಗೌಡ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸುರೇಶ್ ಉಪಸ್ಥಿತರಿದ್ದರು.