ನವದೆಹಲಿ : ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಬಲ ಸೂಚಿಸಿದ್ದಾರೆ.
#IStandWithFarmers(ನಾನು ರೈತರ ಪರ ನಿಲ್ಲುತ್ತೇನೆ) ಎಂಬ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ರೈತರು ನಡೆಸುತ್ತಿರುವ ಅಹಿಂಸಾತ್ಮಕ ಸತ್ಯಾಗ್ರಹ ಇಂದೂ ಕೂಡ ಅಖಂಡವಾಗಿದೆ. ಆದರೆ, ಈ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ಈ ಧೋರಣೆಯಿಂದಾಗಿಯೇ ಇಂದು ಭಾರತ್ ಬಂದ್ ನಡೆಸಬೇಕಾಯಿತು ಎಂದಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಒಂದು ವರ್ಷದಿಂದಲೂ ಪ್ರತಿಭಟನೆ ನಡೆಸುತ್ತಿವೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ 11 ಸುತ್ತುಗಳ ಮಾತುಕತೆ ನಡೆದಿದ್ದು, ವಿಫಲವಾಗಿವೆ. ಈ ನಿಟ್ಟಿನಲ್ಲಿ ಇಂದು 40 ರೈತ ಒಕ್ಕೂಟಗಳ ಸಂಘಟನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಇಂದು 6 ರಿಂದ 4ಗಂಟೆಯವರೆಗೆ ಭಾರತ್ ಬಂದ್ ಗೆ ಕರೆ ನೀಡಿದೆ.
ಕಾಂಗ್ರೆಸ್ ಮೊದಲಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಬಂದಿದೆ. ಇಂದು ನಡೆಯುತ್ತಿರುವ ಭಾರತ್ ಬಂದ್ ಗೆ ನಮ್ಮ ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ.










