ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್ ನಲ್ಲಿ ಇದ್ದಕ್ಕಿದ್ದಂತೆ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾಸಕ ರಾಮಲಿಂಗಾರೆಡ್ಡಿ ಮನೆಯಿಂದ ಕೊಂಚ ದೂರದಲ್ಲಿಯೇ ಈ ಕಟ್ಟಡವಿದ್ದು, ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಕಟ್ಟಡದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಹಳೇ ಕಟ್ಟಡ ಕುಸಿತದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ.
ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್ ನಲ್ಲಿನ ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್ ಎಂಬುವವರಿಗೆ ಈ ಮನೆ ಸೇರಿದೆ. ಕಳೆದ ಎರಡು ವರ್ಷಗಳ ಹಿಂದೆ ಕಟ್ಟಡವು ಸ್ವಲ್ಪ ವಾಲಿತ್ತು. ಇಂದು ಬೆಳಗ್ಗೆ ಕಟ್ಟಡವು ಈ ಹಿಂದಿಗಿಂತಲೂ ಹೆಚ್ಚು ಬಾಗಿದ್ದು, ಅವಘಡದ ಮುನ್ಸೂಚನೆ ಅರಿತು ಮನೆಯಲ್ಲಿ ಇದ್ದವರೆಲ್ಲಾ ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಮನೆ ಕುಸಿದು ಬಿದ್ದಿದೆ.
ಈ ಕಟ್ಟಡದಲ್ಲಿ ಸುಮಾರು 70 ಮಂದಿ ವಾಸವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಟ್ಟಡ ಕುಸಿಯುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.










