ಬೆಂಗಳೂರು : ಮಲ್ಲೇಶ್ವರಂನಲ್ಲಿ ಇರುವ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವತಿಯಿಂದ ನಿರ್ಮಿಸಿರುವ ತಲಾ 50 ಹಾಸಿಗೆಗಳ ಸಾಮರ್ಥ್ಯದ ಘಟಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಗರದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಜತೆಗೆ 243 ವಾರ್ಡುಗಳಲ್ಲೂ ‘ನಮ್ಮ ಕ್ಲಿನಿಕ್’ ಆಸ್ಪತ್ರೆಗಳನ್ನು ನವೆಂಬರ್ ಹೊತ್ತಿಗೆ ಸ್ಥಾಪಿಸಲಾಗುತ್ತಿದೆ. ನಗರದಲ್ಲಿ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.
ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಮತ್ತು 50 ಹಾಸಿಗೆಗಳ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಈ ಆಸ್ಪತ್ರೆಯು ವಿಕ್ಟೋರಿಯಾ ಆಸ್ಪತ್ರೆಯಂತೆ ಸಮಗ್ರವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶ್ರವಣ ದೋಷವಿರುವ ಬಡವರಿಗೆ ಕಾಕ್ಲಿಯರ್ ಶಸ್ತ್ರಚಿಕಿತ್ಸೆಗೆ ನೆರವಾಗಲು ಸರಕಾರವು 500 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಜತೆಗೆ, ಪ್ರತಿ ದಿನ 60 ಸಾವಿರ ಜನರಿಗೆ ಡಯಾಲಿಸಿಸ್ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ಲಾಭ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಒಂದು ಕೋಟಿಗೂ ಹೆಚ್ಚು ಜನರಿರುವ ಬೆಂಗಳೂರಿನಲ್ಲಿ ಜನರಿಗೆ ತೃತೀಯ ಸ್ತರದ ಆರೋಗ್ಯ ಸೇವೆಗಳು ಹೆಚ್ಚಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ವಲಯವನ್ನು ಸದೃಢವಾಗಿ ಬೆಳೆಸಲಾಗುತ್ತಿದೆ. ಪಿಎಚ್ಸಿ, ಸಿಎಚ್ಸಿ ಮತ್ತು ಟರ್ಷರಿ ಆರೋಗ್ಯ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆರ್ಥಿಕ ದುರ್ಬಲರಿಗೆ ಇದರ ಲಾಭ ಸಿಗಲಿದ್ದು, ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದು ಅವರು ತಿಳಿಸಿದರು.










