ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ – ಮೂವರು ಆರೋಪಿಗಳ ಬಂಧನ…

68
firstsuddi

ಮಂಗಳೂರು: ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ 1.84 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಲ್ಲಿ ಮಹಿಳೆ ಸಹಿತ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪುತ್ತೂರು ತಾಲೂಕಿನ ಬಳ್ನಾಡು ಗ್ರಾಮದ ರಮೇಶ್ ಪೂಜಾರಿ (41), ಮಂಗಳೂರಿನ ಅಳಪೆ ಪಡೀಲ್ ನ ಚಂದ್ರಾವತಿ (36), ಬೆಂಗಳೂರಿನ ಸುರೇಂದ್ರ ರೆಡ್ಡಿ (36) ಬಂಧಿತ ಆರೋಪಿಗಳಾಗಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಯಾದ ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ರಾಮಪ್ರಸಾದ್ ರಾವ್ ಪಿ ಆಲಿಯಾಸ್ ಹರೀಶ್ (37) ಎಂಬುವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಇದೀಗ ಮತ್ತೆ ಮೂವರನ್ನು ಬಂಧಿಸುವ ಮೂಲಕ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನವಾಗಿದೆ.

ಪ್ರಮುಖ ಆರೋಪಿ ರಾಮಪ್ರಸಾದ್ ರಾವ್ ಪಿ ಆಲಿಯಾಸ್ ಹರೀಶ್ ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಎಂದು ಫರಂಗಿಪೇಟೆ ಸಮೀಪದ ವಳಚ್ಚಿಲ್ ಪದವಿನ ದೇವಿಪ್ರಸಾದ್ ಮತ್ತಿತರರು ಆ.18ರಂದು ದೂರು ನೀಡಿದ್ದರು. ಅದರಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.