ಬೆಂಗಳೂರು : ಕೆಎಎಸ್ ಅಧಿಕಾರಿ ಕೆ.ರಂಗನಾಥ್ಗೆ ಸಂಬಂಧಿಸಿದ ಮನೆ ಮತ್ತು ಟ್ರಸ್ಟ್ ಸೇರಿದಂತೆ 5 ಕಡೆ ಏಕ ಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ.
ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಮನೆ, ದೊಡ್ಡಬಳ್ಳಾಪುರ ನಗರದ ಕನಕಶ್ರೀ ಟ್ರಸ್ಟ್ ಕಚೇರಿ ಮತ್ತು ಪಬ್ಲಿಕ್ ಶಾಲೆ, ದೊಡ್ಡಬಳ್ಳಾಪುರದ ಚೈತನ್ಯನಗರದ ಮನೆ, ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ, ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿ ಕಚೇರಿ ಸೇರಿದಂತೆ ಒಟ್ಟು 5 ಕಡೆ ದಾಳಿ ಮಾಡಲಾಗಿದೆ. 42 ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ 5 ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿಯಾಗಿದ್ದರು. ಆಗ ಜಮೀನುಗಳ ಮೂಲ ಮಂಜೂರಾತಿ ದಾಖಲೆಗಳ ಪರಿಶೀಲನೆ ಮಾಡದೇ ಮತ್ತು ಅಂದಿನ ತಹಶೀಲ್ದಾರ್ ಅವರಿಂದ ಯಾವುದೇ ವರದಿ ಪಡೆಯದೇ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ಪರಭಾರೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.










