ಕೇಂದ್ರ ಸಚಿವ ಕೌಶಲ್ ಕಿಶೋರ್ ಮನೆಯಲ್ಲಿ ಗುಂಡಿನ ದಾಳಿ- ಮಗನ ಗೆಳೆಯನ ಕೊಲೆ…

77
firstsuddi

ಲಕ್ನೋ: ಲಕ್ನೋದ ಠಾಕುರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಗಾರಿಯಾ ಗ್ರಾಮದಲ್ಲಿರುವ ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮೃತನನ್ನು ವಿನಯ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದೆ. ಈತ ಸಚಿವರ ಮಗನ ಗೆಳೆಯ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಪರಿಶೀಲನೆ ನಡೆಯುತ್ತಿದೆ. ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇತ್ತ ವಿನಯ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವಿನಯ್ ಶ್ರೀವಾಸ್ತವ್ ಅವರ ಕುಟುಂಬಸ್ಥರು ಕೊಲೆ ಆರೋಪದಡಿ ದೂರು ದಾಖಲಿಸಿದ್ದಾರೆ. ಪಶ್ಚಿಮ ಡಿಸಿಪಿ ರಾಹುಲ್ ರಾಜ್, ಎಡಿಸಿಪಿ ಚಿರಂಜೀವ್ ನಾಥ್ ಸಿನ್ಹಾ ಸೇರಿದಂತೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಇಂದು ಬೆಳಗ್ಗಿನ ಜಾವ 4 ಗಂಟೆಗೆ ವಿನಯ್ ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮೃತದೇಹ ಹಾಸಿಗೆ ಬಳಿ ನೆಲದ ಮೇಲೆ ಬಿದ್ದಿತ್ತು. ಈ ಸಂದರ್ಭದಲ್ಲಿ ಅಜಯ್ ರಾವತ್, ಅಂಕಿತ್ ಶರ್ಮಾ, ಶಮೀಮ್ ಬಾಬಾ, ಬಂಟಿ ಮತ್ತು ಇನ್ನಿಬ್ಬರು ಅಪರಿಚಿತರು ಸ್ಥಳದಲ್ಲಿದ್ದರು ಎಂಬುದಾಗಿ ವರದಿಯಾಗಿದೆ.