ನವದೆಹಲಿ : ಇಂದು ಅಂತರಾಷ್ಟ್ರೀಯ ಸಾಕ್ಷರತಾ ದಿನದ ಅಂಗವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಕ್ಷರತಾ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸಾಕ್ಷರತಾ ಪಟ್ಟಿಯಲ್ಲಿ ಕರ್ನಾಟಕ 15ನೇ ಸ್ಥಾನವನ್ನು ಪಡೆದುಕೊಂಡಿದೆ. ಸಾಕ್ಷರತಾ ಪಟ್ಟಿಯಲ್ಲಿ ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತೆಯ ಪ್ರಮಾಣದ ಬಗ್ಗೆ ರಾಜ್ಯವಾರು ಮಾಹಿತಿಯನ್ನು ನೀಡಲಾಗುತ್ತದೆ. ಸಮೀಕ್ಷೆಯ ಪ್ರಕಾರ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಶೇ.77.7 ರಷ್ಟಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶೇ.73.5 ಹಾಗೂ ನಗರ ಪ್ರದೇಶಗಳಲ್ಲಿ ಶೇ.87.7ರಷ್ಟು ಸಾಕ್ಷರತಾ ಪ್ರಮಾಣವಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಾಕ್ಷರತಾ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಕೇರಳದಲ್ಲಿ ಸಾಕ್ಷರತೆಯ ಪ್ರಮಾಣ ಶೇ.96.2ರಷ್ಟಿದೆ. ಹಾಗೂ ಶೇ. 66.4ರಷ್ಟು ಸಾಕ್ಷರತೆ ಪಡೆದಿರುವ ಆಂಧ್ರಪ್ರದೇಶ ಕೊನೆಯ ಸ್ಥಾನದಲ್ಲಿದೆ. ಕರ್ನಾಟಕ 77.2ರಷ್ಟು ಸಾಕ್ಷರತಾ ಪ್ರಮಾಣವನ್ನು ಪಡೆದುಕೊಂಡು 15ನೇ ಸ್ಥಾನದಲ್ಲಿದೆ.










