ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಜನಜಾಗೃತಿ ಮೂಡಿಸುವ ಸಮಾವೇಶ…

79
firstsuddi

ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ವಿರುದ್ಧ ಜನಜಾಗೃತಿ ಮೂಡಿಸುವ ನಿರ್ಣಾಯವನ್ನು ನಗರದಲ್ಲಿ ಇಂದು ನಡೆದ ಎಐಟಿಯುಸಿ ಜಿಲ್ಲಾ ಸಂಘಟನಾ ಸಮಾವೇಶ ಕೈಗೊಂಡಿದೆ.

ನಗರದ ಎಐಟಿಯುಸಿ ಕಚೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಹುತೇಕ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಅಗ್ನಿಪಥ ಯೋಜನೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು ದೇಶ ಕಾಯುವ ಯೋಧರಿಗೆ ಅರೆಕಾಲಿಕ ಹುದ್ದೆ ನೀಡಲು ಹೊರಟಿರುವುದು ರಾಷ್ಟ್ರದ ಭದ್ರತೆಗೆ ಮತ್ತು ಯುವ ಜನತೆಯ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ನಿರ್ಧಾರ ಮಾಡಲಾಯಿತು. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಲಾಯಿತು.

ಇದೇ ವೇಳೆ ನಡೆದ ಎಐಟಿಯುಸಿ ಜಿಲ್ಲಾ ಪದಾಧಿಕಾರಿಗಳ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಕೆ.ಗುಣಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ವಸಂತಕುಮಾರ್, ಉಪಾಧ್ಯಕ್ಷರುಗಳಾಗಿ ಗಿರಿಜಾ, ಸಿ.ಸಿ.ಮಂಜೇಗೌಡ, ಸುಬ್ರಮಣ್ಯ, ಎ.ಜಯಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಪ್ರಕಾಶ್, ಮಹಮದ್ ಆಲಿ, ನಳಿನ, ಕೆ.ಆರ್.ಶೈಲಾ, ಖಜಾಂಚಿಯಾಗಿ ಎಂ.ಎಸ್.ಜಾನಕಿ ಆಯ್ಕೆಯಾದರು.

ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಸಮಾವೇಶವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಗುಣಶೇಖರ್ ಅಧ್ಯಕ್ಷತೆವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಒಕ್ಕೂಟದ ಜಿಲ್ಲಾಧ್ಯಕ್ಷೆ ಗ್ರೇಟಾ ಫರ್ನಾಂಡೀಸ್, ಪ್ರಧಾನ ಕಾರ್ಯದರ್ಶಿ ಪುಷ್ಪಾ, ರಾಜ್ಯ ಕಾರ್ಯದರ್ಶಿ ವಿಜಯಕುಮಾರಿ, ಸಿಪಿಐ ಮುಖಂಡರಾದ ಕೆಳಗೂರು ರಮೇಶ್, ಜಯಕುಮಾರ್ ಉಪಸ್ಥಿತರಿದ್ದರು.