ಕೇರಳ ಉತ್ಸವದಲ್ಲಿ ಕೆರಳಿದ ಆನೆ, 29 ಮಂದಿಗೆ ಗಾಯ.

32

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು ಕೆರಳಿದ ಪರಿಣಾಮ 29 ಮಂದಿ ಗಾಯಗೊಂಡಿದ್ದಾರೆ. ಈ ಉತ್ಸವದಲ್ಲಿ ಐದು ಆನೆಗಳನ್ನು ಅಲಂಕರಿಸಲಾಗಿತ್ತು. ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ಸೇರಿದ್ದರು. ವಾದ್ಯಗಳ ಸದ್ದು, ಜನರ ಗದ್ದಲದ ನಡುವೆ ನಿಯಂತ್ರಣ ಕಳೆದುಕೊಂಡ ಪಾಕ್ಕಾತು ಶ್ರೀಕುಟ್ಟನ್ ಹೆಸರಿನ ಆನೆ, ವ್ಯಕ್ತಿಯೊಬ್ಬನನ್ನ ಎತ್ತಿ ಎಸೆದಿದೆ. ಈ ವೇಳೆ ಗುಂಪಿನಲ್ಲಿದ್ದ ಜನರೆಲ್ಲಾ ಓಡಿದ್ದಾರೆ. ಕೆಲವರು ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ನಸುಕಿನ 2:30ರ ಸುಮಾರಿಗೆ ಮಾವುತ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಘಟನೆಯಲ್ಲಿ ಸುಮಾರು 29 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ವೇಳೆ ಹಠಾತ್ತನೆ ಜನರ ಕಡೆಗೆ ನುಗ್ಗಿದ್ದ ಪಾಕ್ಕಾತು ಶ್ರೀಕುಟ್ಟನ್ ಹೆಸರಿನ ಆನೆ ದಾಳಿ ನಡೆಸಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆನೆ ದಾಳಿಗೆ ಒಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕೋಟಕ್ಕಲ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.