ಬೆಳಗಾವಿ: ಖಾನಾಪುರ ತಾಲೂಕು ಆಸ್ಪತ್ರೆಯ ವೈದ್ಯರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ನಿಯೋಜನೆ ಮಾಡಿದ್ದಕ್ಕೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಬೆಳಗಾವಿ ಡಿಹೆಚ್ಒ ಡಾ.ಮಹೇಶ್ ಕೋಣಿಗೆ ಕರೆ ಮಾಡಿ ತರಾಟೆಗೆ ತಗೆದುಕೊಂಡಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿ ಡಿಹೆಚ್ಒ ಡಾ.ಮಹೇಶ್ ಕೋಣಿ ಪತ್ರ ಬರೆದಿದ್ದಾರೆ. ತಮ್ಮದೇನೂ ತಪ್ಪು ಇಲ್ಲದೇ ಇದ್ದರೂ ಜನಪ್ರತಿನಿಧಿಗಳು ತಮಗೆ ಕರೆ ಮಾಡಿ ತರಾಟೆ ತಗೆದುಕೊಳ್ಳುತ್ತಿದ್ದಾರೆ ಎಂದು ಡಾ.ಮಹೇಶ್ ಕೋಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಏನಿದೆ?:
ತಾಲೂಕು ಆಸ್ಪತ್ರೆಯಿಂದ ಬೆಳಗಾವಿಯ ಬಿಮ್ಸ್ ಗೆ ನಿಯೋಜನೆಗೊಂಡ ತಜ್ಞ ವೈದ್ಯರು ಹಾಗೂ ಇತರ ಸಿಬ್ಬಂದಿ ಪಟ್ಟಿ ಸಮೇತ ಪತ್ರ ಬರೆದಿದ್ದಾರೆ. ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರ ಪತ್ರಗಳ ಹಾಗೂ ಮೌಖಿಕ ಆದೇಶಗಳ ಅನ್ವಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಬಿಮ್ಸ್ ಗೆ ನಿಯೋಜಿಸಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಬಿಮ್ಸ್ ಗೆ ನಿಯೋಜನೆ ಮಾಡಿದ್ದರಿಂದ ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಡಾ. ಮಹೇಶ್ ಕೋಣಿ ಉಲ್ಲೇಖಿಸಿದ್ದಾರೆ.
ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ತಾಲೂಕು ಕೇಂದ್ರಗಳಿಂದ ಬಿಮ್ಸ್ ಗೆ ನಿಯೋಜನೆ ಮಾಡುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಆಗುತ್ತಿಲ್ಲ ಎಂದು ಜನಪ್ರತಿನಿಧಿಗಳು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಬಿಮ್ಸ್ ಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಮೂಲ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲು ಸೂಚಿಸಿರುತ್ತಾರೆ. ಹೀಗಾಗಿ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಬಿಮ್ಸ್ ಗೆ ಕಳಿಸುವುದರಿಂದ ಆಗುತ್ತಿರುವ ತೊಂದರೆ ನಿವಾರಿಸುವಂತೆ ಮನವಿ ಮಾಡಿದ್ದಾರೆ.
ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ತಜ್ಞ ವೈದ್ಯರ ಕೊರತೆ ಇದೆ. ಈ ಮಧ್ಯೆ ತಾಲೂಕು ಕೇಂದ್ರಗಳಿಗೆ ನೇಮಕಗೊಂಡ ತಜ್ಞ ವೈದ್ಯರನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಿದರೆ ತಾಲೂಕು ಆಸ್ಪತ್ರೆಗಳಿಗೆ ಬರುವ ಹಳ್ಳಿ ಜನರ ಪಾಡೇನು? ಈ ಬಗ್ಗೆ ಸರ್ಕಾರ ಸೂಕ್ತ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.










