ಡಾ. ಎಂ.ಎಸ್. ಮಣಿ
ವೈದ್ಯಕೀಯಕರಣ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬೆಳವಣಿಗೆ ಕಂಡಿದ್ದರೂ ಅದು ಕೂಡ ಅಪೂರ್ಣವಾಗಿದೆ. ಅಂದರೆ ಹಲವು ಜನ ಸಾಂಕ್ರಾಮಿಕ ರೋಗಗಳ ಸಮಸ್ಯೆಗಳಿಗೆ ವೈದ್ಯಕೀಯ ಪರಿಹಾರವನ್ನು ಕಂಡುಕೊಂಡಿರುವುದಿಲ್ಲ. ಅಲ್ಲದೆ ಹಲವು ಪ್ರಕರಣಗಳಲ್ಲಿ ವೆಚ್ಚವು ನಿರ್ಣಾಯಕವಾಗಿರುತ್ತದೆ. ಜನ ಎದುರು ನೋಡುವ `ವೈದ್ಯಕೀಯ ಪರಿಹಾರ’ವನ್ನು ಪಡೆಯಲು ವೆಚ್ಚದ ಕಾರಣಕ್ಕೆ ಸಾಧ್ಯವಾಗುತ್ತಿಲ್ಲ.
ಅಲ್ಲದೆ, ಸಾಂಕ್ರಾಮಿಕ ಬೆದರಿಕೆಯು ಅನಿಶ್ಚಿತ ಪ್ರತಿಕ್ರಿಯೆಯಿಂದ ಕೂಡಿರುತ್ತದೆ. ಇಂತಹ ಹಲವು ಅನಿಶ್ಚಿತತೆಗಳು `ರಾಜಕೀಯ ಇಚ್ಛಾಶಕ್ತಿ’ಯ ಕೊರತೆಯಿಂದ `ಸಾಂಕ್ರಾಮಿಕ ರೋಗಗಳ ಪರಿಸರ’ ಉಂಟಾಗುತ್ತದೆ. ಕಡಿಮೆ ಶ್ರೀಮಂತಿಕೆ ಹೊಂದಿರುವ ದೇಶಗಳ ಆರೋಗ್ಯ ಅಭಿವೃದ್ಧಿಗೆ ಒತ್ತು ನೀಡುವ ಅಭಿವೃದ್ಧಿ ಹೊಂದಿದ ದೇಶಗಳ ನಡೆಯ ಹಿಂದೆ ಅದರದ್ದೇ ಆದ ಹಿತಾಸಕ್ತಿ ಇರಲೂಬಹುದು. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಆದ್ಯತೆ ಕೊಡಲಾಗಿದೆ ಎಂದು ಅರಸಿದಾಗ ಖಂಡಿತವಾಗಿಯೂ ರಾಜಕೀಯ ಭಿನ್ನಾಭಿಪ್ರಾಯಗಳು ಕಾಣುತ್ತವೆ. ಹೊಸ ಹೊಸ ರಾಜಕೀಯ ಅಂಶಗಳು ಉದ್ಭವಿಸಿವೆ.
ಇಷ್ಟಕ್ಕೆಲ್ಲವೂ ಮೂಲಕಾರಣ ಸಾವಿನ ಬೆದರಿಕೆ. `ಕೊರೋನಾ’ ವಾಸಿಯಾಗದ ಸೋಂಕು ಹಾಗೂ ಔಷಧ ಇಲ್ಲದ ರೋಗ. ಸಾವು ಅನಿವಾರ್ಯ ಎಂಬ ಭಯವನ್ನು ಮತ್ತು ಅತಾರ್ಕಿತ ಗಾಳಿಸುದ್ದಿಗಳು ಜನಸಾಮಾನ್ಯರನ್ನು ಹೈರಾಣಾಗಿಸಿಬಿಟ್ಟಿವೆ. ಸಾಮಾನ್ಯವಾಗಿ ಎಲ್ಲ ರೀತಿಯ ಭಯಕ್ಕೆ, ಮನಸ್ಸಿನ ಶಕ್ತಿಯೇ ಮೊದಲ ಔಷಧ. ಇದನ್ನು ಮಾಧ್ಯಮಗಳು ಸೇರಿದಂತೆ ಆಡಳಿತಗಾರರು ನಿಷ್ಕ್ರಿಯಗೊಳಿಸಿಬಿಟ್ಟರು. ಹೀಗಾಗಿಯೇ ಜನ ಕೆಟ್ಟ ಭೀತಿಯಲ್ಲಿ ಮುಳುಗಿ ಹೋದರು.
ಕೊರೋನಾ ಸೋಂಕಿಗೆ ಸಿಗದ ಜನರಿಗೆ ಇದೊಂದು ಬುದ್ಧಿವಂತಿಕೆಯ ಕಾಟವೇ? ಖಂಡಿತವಾಗಿಯೂ ಇಲ್ಲ. ಇದು `ಮೂರ್ಖತನದ ಕಾಲ’. `ಹತಾಶೆಯ ಕಾಲ’. ಕಾರಣ ನಾನೇ ಜಗತ್ತಿಗೆ ಒಡೆಯ, ವಿಶ್ವಣ್ಣ, ನಂ. 1, ನಂ. 2 ಎಂದು ಬೀಗುತ್ತಿದ್ದವರ ಬಂಡವಾಳವನ್ನು `ಕೊರೋನಾ’ ಸೋಂಕು ಬಹಳ ಸುಲಭವಾಗಿ ಅನಾವರಣಗೊಳಿಸಿಬಿಟ್ಟಿದೆ. ಇದು `ಮೂರ್ಖತನದ ಪರಮಾವಧಿ ಕಾಲ’ ಎಂದೇಕೆ ಹೇಳಿದೆನೆಂದರೆ, ಇಲ್ಲಿ ಯಾರೊಬ್ಬರು ವೈಚಾರಿಕವಾಗಿ ಚಿಂತಿಸಲೇ ಇಲ್ಲ.
ಬಹುಸಂಖ್ಯಾತರ ನಿರ್ದಯತನ, ಸ್ವಾರ್ಥದ ನಡುವೆ ಅವಕಾಶವಂಚಿತರ ಬಗ್ಗೆ ಬೆರಳೆಣಿಕೆಯಷ್ಟು ಜನ ಮಾತ್ರ ದಯೆ ಮತ್ತು ಧೈರ್ಯ ತೋರಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯದ ಹೇಳಿಕೆಯ ನಂತರ ವಲಸೆ ಕಾರ್ಮಿಕರು ತೆರಳಲು `ಸಾರಿಗೆ ವ್ಯವಸ್ಥೆ’, `ಊಟ’, `ನೀರಿನ ವ್ಯವಸ್ಥೆ’ ಮಾಡಿದವು. ಆದರೆ ಇದು ಕೂಡ ಸಕಾಲದಲ್ಲಿ ಆಗಬೇಕಿತ್ತು.
ಇವತ್ತು ದಿನವೊಂದಕ್ಕೆ 60 ಸಾವಿರಕ್ಕೂ ಅಧಿಕ ಜನರನ್ನು ಸೋಂಕು ಭಾದಿಸಿದೆ. ಕೊರೋನಾ ಭಾದಿಸದ ಬಡಾವಣೆಗಳೇ ಬೆಂಗಳೂರು, ಚೆನ್ನೈ, ಮುಂಬೈ ನಗರಗಳಲ್ಲಿ ಇಲ್ಲದಂತಾಗಿದೆ. ಬಹುತೇಕ ಮೂರು ನಗರಗಳು ನರಳಿವೆ. ಇಲ್ಲಿನ ಕೆಲವೆಡೆ ಕುಟುಂಬಕ್ಕೆ ಕುಟುಂಬವೇ ಕೊರೋನಾ ಪೀಡನೆಗೆ ಒಳಗಾಗಿದೆ. ಹೊಟ್ಟೆಪಾಡಿಗಾಗಿ ವಲಸೆ ಬಂದ ಜನ ರಾತ್ರೋರಾತ್ರಿ ಜೀವಭಯದಿಂದ ಊರು ಬಿಟ್ಟಿದ್ದಾರೆ. `ಸೀಲ್‍ಡೌನ್’ ಆದಂತಹ ರಸ್ತೆಗಳಂತೂ ನಿರ್ಮಾನುಷದಿಂದ ಕೂಡಿವೆ. ಬಾನೆತ್ತರದ ಮಾಲ್‍ಗಳು, ಮೆಟ್ರೋ ರೈಲು ಸ್ಥಗಿತಗೊಂಡು ಮಕ್ಕಳ ಆಟಿಕೆಯಂತೆ ಪ್ರದರ್ಶನಕ್ಕೊಳಗಾಗಿದೆ. ಅಳಿದುಳಿದ ಅಂಗಡಿ, ಮುಗ್ಗಟ್ಟುಗಳು ವ್ಯಾಪಾರ, ವಹಿವಾಟಿಲ್ಲದೆ ಸೂತಕದ ಛಾಯೆ ಹೊತ್ತು ಕುಳಿತಿವೆ.
ಕ್ಯಾಪ್ಟನ್ ಮಣಿವಣ್ಣನ್‍ನಂತಹ ಅಧಿಕಾರಿ ವಾರ್ತಾ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ದಿನಕ್ಕೆರಡು ಹೊತ್ತು ಊಟದ ಪ್ಯಾಕೆಟ್ ಕೊಟ್ಟು ಹಲವರ ಜೀವ ಉಳಿಸಿದ್ದರು. ಬೆಂಗಳೂರು ಪ್ರೆಸ್ ಕ್ಲಬ್‍ನ ಅಧ್ಯಕ್ಷರಾದ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಕೋಶಾಧ್ಯಕ್ಷ ಬಿ.ಎನ್. ರಮೇಶ್ ಮುತುವರ್ಜಿವಹಿಸಿ ಸರ್ಕಾರದಿಂದ ಪತ್ರಕರ್ತರಿಗೆ ಆಹಾರ ಧಾನ್ಯದ ಕಿಟ್‍ಗಳನ್ನು ತರಿಸಿ ವಿತರಿಸಿದ್ದರು. ಇದೇ ರೀತಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಶರಣು, ಸೋಮಶೇಖರ್ ಗಾಂಧಿ ಅವರುಗಳು ಕೂಡ ಪತ್ರಕರ್ತರಿಗೆ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಿದ್ದರು. ಜೊತೆಗೆ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷ ಕಲಾವಿದ ವಿಷ್ಣು, ರಾಜಗೋಪಾಲ್, ನರೇಂದ್ರ, ದಾಸ್ ಮತ್ತು ಅವರ ಸಂಗಡಿಗರೂ ಕೂಡಿ ದಾನಿಗಳಿಂದ ದವಸ ಧಾನ್ಯಗಳ ಕಿಟ್‍ನ್ನು ಪತ್ರಕರ್ತರಿಗೆ ಕೊಡಿಸಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‍ನ ಅಧ್ಯಕ್ಷ ಬಿ. ನಾರಾಯಣ್ ಅವರು ಅಟಿಕಾ ಗೋಲ್ಡ್ ಜ್ಯೂವೆಲರ್ಸ್ ವತಿಯಿಂದ ಫುಡ್ ಕಿಟ್‍ಗಳನ್ನು ಪತ್ರಕರ್ತರಿಗೆ ಕೊಡಿಸಿದ್ದರು. ಆಹಾರ ಸಿಗದ ಜನಸಾಮಾನ್ಯರನೇಕರು ಸಿಕ್ಕಿದ್ದನ್ನು ತಿಂದು ಜೀರ್ಣಿಸಿಕೊಂಡಿದ್ದಾರೆ. ಕೆಲವರು ಮನೆ ದರೋಡೆಗೂ ಇಳಿದಿದ್ದಾರೆ. ಇತ್ತೀಚೆಗೆ ಕಾಡುಗೋಡಿಯ ಚನ್ನಸಂದ್ರದ ಅಪ್ಪಯ್ಯಣ್ಣ ಅವರ ಬಿಲ್ಡಿಂಗ್‍ನಲ್ಲಿ ಸಿಂಧನೂರಿನ ವೀರೇಶ್ ಮತ್ತು ಚೈತ್ರಾ ದಂಪತಿ ಬಾಡಿಗೆಗಿದ್ದರು. ವಿರೇಶ್ ಕ್ಯಾಬ್ ಚಾಲಕನಾಗಿದ್ದು, ಚೈತ್ರಾ ಆನ್‍ಲೈನ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಇಲ್ಲದೆ 6 ತಿಂಗಳಿನಿಂದ ಸಂಕಷ್ಟದಲ್ಲಿದ್ದರು. ಕೊನೆಗೆ ಕಟ್ಟಡ ಮಾಲೀಕರ ಪತ್ನಿ ವೃದ್ಧೆ ಜಯಮ್ಮ ಅವರ ಕತ್ತುಕುಯ್ದು 45 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ರಾಜಸ್ತಾನದ ಜೈಪುರದಲ್ಲಿ ಸಂಸ್ಥೆಯೊಂದು 1,162 ಭಿಕ್ಷುಕರ ಸಮೀಕ್ಷೆ ನಡೆಸಿದೆ. ಅವರಲ್ಲಿ 193 ಮಂದಿ ಅಕ್ಷರಸ್ಥರಿದ್ದು, ಐದು ಮಂದಿ ಪದವಿ ಪಡೆದಿದ್ದಾರೆ. ಕೊರೋನಾ ವೈರಸ್‍ನಿಂದಾಗಿ ಕೆಲಸ ಕಳೆದುಕೊಳ್ಳುವವರು ಇದೀಗ ಭಿಕ್ಷೆ ಬೇಡಿ ಜೀವನ ಸಾಗಿಸುವ ದುಸ್ಥಿತಿಯಲ್ಲಿದ್ದಾರೆ.
ನೋಡುತ್ತಿದ್ದರೆ ಸೋಂಕು ಬಿಟ್ಟುಹೋಗುವಂತೆ ಕಾಣಿಸುತ್ತಿಲ್ಲ. ಇನ್ನೂ ಸೋಂಕು ವ್ಯಾಪಕವಾಗಿ ಹರಡಲುಬಹುದು. ಭವಿಷ್ಯದಲ್ಲಿ ನಮ್ಮ ದೇಶ ಮಾತ್ರವಲ್ಲ, ಜಗತ್ತು ಸೋಂಕನ್ನು ಹೇಗೆ ಎದುರಿಸುತ್ತದೆ ಎಂಬುದೇ ಪ್ರಶ್ನೆಯಾಗಿದೆ. ಸೋಂಕಿನ ತೀವ್ರಗತಿಯಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ `ಸಾರ್ವಜನಿಕ ಆರೋಗ್ಯ’, `ಮೂಲಸೌಕರ್ಯ’ ಅತ್ಯಂತ ಯಾತನಾದಾಯಕವಾಗಿದೆ. ಅಲ್ಲದೆ ಇದೊಂದೆ `ಹೊರೆ’ ಎಂದು ಎದುರಿಸುತ್ತಿದೆ. ಇಂತಹ ಮಾರಣಾಂತಿಕ ಸೋಂಕಿನಿಂದ ಹೊರಬರಲು `ಸಾರ್ವಜನಿಕ ಆರೋಗ್ಯ’ ವ್ಯವಸ್ಥೆಯನ್ನು ಸದೃಢಗೊಳಿಸಬೇಕಿದೆ.
ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಕ್ಯಾಪ್ಟನ್ ಮಣಿವಣ್ಣನ್, ಜಾವೇದ್ ಅಖ್ತರ್, ಡಾ. ಪಿ.ಎಸ್. ಹರ್ಷ, ಮೊಹಮದ್ ಮೊಹಿಸಿನ್ ಅವರಂತಹ ಅಧಿಕಾರಿಗಳಿಗೆ ಅವರ `ಅಧಿಕಾರ ಮಿತಿ’ ಕುರಿತಂತೆ ಅರಿವಿದೆ. ಇವರಿಗೆ ಗೊತ್ತಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಅಧಿಕಾರವೂ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಬಳಿ ಇರುತ್ತದೆ. ಹಾಗಂತ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಆಪ್ತ ಇಲಾಖೆಯಲ್ಲಿ ಸುಶಿಕ್ಷಿತರು ಮತ್ತು ಜ್ಞಾನಿಗಳು ಇಲ್ಲವೆಂದಿಲ್ಲ. ನಿವೃತ್ತ ಅಧಿಕಾರಿ ಲಕ್ಷ್ಮೀನಾರಾಯಣ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್. ಕೃಷ್ಣಯ್ಯ, ವಾರ್ತಾ ಇಲಾಖೆಯ ನಿವೃತ್ತ ನಿರ್ದೇಶಕ ಭೃಂಗೇಶ್, ಮಾಧ್ಯಮ ಸಲಹೆಗಾರರಾದ ಮಹದೇವ ಪ್ರಕಾಶ್, ಶಾಂತಾರಾಂ ಭಟ್, ಎಲ್. ಪ್ರಕಾಶ್, ಬಿ.ಎನ್. ಶ್ರೀಧರ್ ಅವರಂತಹ ನುರಿತವರಿದ್ದಾರೆ. ಆದರೆ ಇವರ್ಯಾರಿಗೂ ಮುಖ್ಯಮಂತ್ರಿಗಳ, ಮಂತ್ರಿಗಳ ಇಚ್ಛೆ ವಿರೋಧಿಸುವ ಮನಸ್ಸಿಲ್ಲ.
ಇನ್ನೂ `ವೈರಸ್, ಪ್ಲೇಗ್‍ಗಳ ಇತಿಹಾಸ’ ಹಾಗೂ `ಜನರ ಇತಿಹಾಸ’ ಎಂದರೆ ಅದೀಗ ಜಗತ್ತಿನ ಇತಿಹಾಸವಾಗಿದೆ. ಸೋಂಕುಗಳ ಆಗಮನದಿಂದ ಜಗತ್ತು ಹೊಸ ಸ್ವರೂಪದೊಂದಿಗೆ ರೂಪಿತಗೊಂಡಿದೆ. `ಇತಿಹಾಸ’ವನ್ನು ಕೇವಲ ಜನರಷ್ಟೆ ಬರೆದಿಲ್ಲ, ಸೃಷ್ಟಿಸಿಲ್ಲ. ಸೂಕ್ಷ್ಮಜೀವಿಗಳು ಕೂಡ ತಮ್ಮದೇ ಸ್ವರೂಪದಲ್ಲಿ ದಾಖಲಿಸಿವೆ. ವೈರಾಣು ಮಾನವನ ಇತಿಹಾಸವನ್ನೇ ಬದಲಿಸಿವೆ.
ಲೂಯಿ ಪಾಶ್ಚರ್ ಎಂಬ ಯುಗಪುರುಷ ಅದ್ಯಾವ ಘಳಿಗೆಯಲ್ಲಿ ಜೈವಿಕ ಲಸಿಕೆ ಅವಿಷ್ಕರಿಸಿದನೋ ಅಂದಿನಿಂದ ಬಹಳಷ್ಟು ಮಹನೀಯರು `ವೈರಾಣು’ ವಿರುದ್ಧದ ಯುದ್ಧದಲ್ಲಿ ಕೈಜೋಡಿಸಿದ್ದಾರೆ. ಇಂತಹವರುಗಳ ಅನ್ವೇಷಣೆ, ಅವಿಷ್ಕಾರಗಳಿಂದಾಗಿ ಯಾತನಾದಾಯಕವಾದ ಖಾಯಿಲೆಗಳು ಸಂಹಾರವಾಗಿವೆ. ವೈರಾಣುಗಳು ಒಂದು ಕಾಲಕ್ಕೆ ಮಿಲಿಯನ್‍ಗಟ್ಟಲೆ ಜೀವಗಳನ್ನು ಬಲಿಪಡೆದಿದ್ದವು. ಹಲವು ಕ್ರಮ, ವಿಧಾನಗಳ ಮೂಲಕ ಇವುಗಳನ್ನು ನಿಯಂತ್ರಣದಲ್ಲಿಡಲಾಗಿತ್ತು. ಹಾಗೆಯೇ ನಿರ್ಮೂಲನೆಯನ್ನು ಮಾಡಲಾಗಿತ್ತು.
`ಪ್ಲೇಗ್’, `ಕಾಲರಾ’ ಕಾಡುವಾಗ `ತೆರಿಗೆ ವಸೂಲಾತಿ’ ಹೇಗೆ ಭಾದಿಸಿದೆ ಎಂಬುದನ್ನು ನಾನು ನೋಡಿಲ್ಲ. ಆದರೆ, ಇದೀಗ ನೀರಿನ ಶುಲ್ಕ, ವಿದ್ಯುತ್ ಶುಲ್ಕ, ಮನೆ ಕಂದಾಯ, ಗೃಹ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ, ನೋಟಿಸ್ ವೆಚ್ಚ ಎಲ್ಲವೂ ಕೂಡಿ ಹೈರಾಣಾಗಿಸಿಬಿಟ್ಟಿದೆ. `ಪ್ಲೇಗ್’, `ಕಾಲರಾ’ ಕಾಲದಲ್ಲಿ ನಮ್ಮನ್ನು ಆಂಗ್ಲರು ಆಳುತ್ತಿದ್ದರು. ತೆರಿಗೆ ನೀಡದವರನ್ನು ಹಿಂಸೆ ಇಟ್ಟು ಕಾಡಿದ್ದರು. ಎಷ್ಟೇ ಕಾಡಿ-ಬೆಡಿದ್ದರೂ ಕರ ವಿನಾಯಿತಿ ತೋರಿರಲಿಲ್ಲ. ಆದರೆ ನಾವಿಂದು `ಪ್ರಜೆಗಳೇ ಪ್ರಭುಗಳು’ ಎಂಬ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಇಂತಹ ಪ್ರಭುಗಳಿಂದು ಸಂಕಷ್ಟದಲ್ಲಿದ್ದಾರೆ. ಕೋರ್ಟ್ ಕೂಡ `ಲಾಕ್‍ಡೌನ್’ ಜಾರಿಗೊಳಿಸುವ ನಿಮ್ಮ ನಿರ್ಧಾರದಿಂದಾಗಿಯೇ ಜನರು ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಇದು ಜನರ ವ್ಯಾಪಾರ, ವಹಿವಾಟನ್ನು ಪರಿಗಣಿಸುವ ಸಮಯ ಅಲ್ಲ. ಜನ ಸಂಕಷ್ಟವನ್ನು ನೀವೇ ಆಲಿಸಬೇಕು. ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿರ್ಧಾರ ಕೈಗೊಳ್ಳುವ ಎಲ್ಲಾ ಅಧಿಕಾರ ನಿಮಗಿದ್ದರೂ, ನೀವು ಈವರೆಗೆ ಖಚಿತ ಅಭಿಪ್ರಾಯ ತಿಳಿಸಿಲ್ಲ. ಕೇಂದ್ರ ಸರ್ಕಾರ ಆರ್‍ಬಿಐನ ಹಿಂದೆ ಅವಿತುಕೊಳ್ಳುವ ಕೆಲಸ ಮಾಡುತ್ತಿದೆ ಎಂದಿದೆ. ಹಾಗೆಯೇ ಸಂಕಷ್ಟದಲ್ಲಿರುವ ಸಾಲಗಾರರ ಹಿತಾಸಕ್ತಿಗೆ ಪೂರಕವಾಗಿ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದ ವರೆಗೆ ಸುಸ್ತಿದಾರರು ಎಂದು ಘೋಷಿಸದಂತೆ ಕೇಂದ್ರ ಸರ್ಕಾರ ಮತ್ತು ಆರ್‍ಬಿಐಗೆ ಸೂಚನೆಯನ್ನು ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ಜನರನ್ನು ಶುಲ್ಕ, ಕರ, ಬಡ್ಡಿ, ಸುಸ್ತಿ ಬಡ್ಡಿ, ನೋಟಿಸ್ ವೆಚ್ಚ ಎಂಬ ಶುಲ್ಕಗಳಿಂದ ಕನಿಷ್ಟ 600 ಅಡಿ ನಿವೇಶನದಲ್ಲಿ ಮನೆ ಕಟ್ಟಿಕೊಂಡವರನ್ನಾದರೂ ಕಾಪಾಡಬೇಕಿದೆ.
`ಮಾನವನ ಇತಿಹಾಸ’, `ವೈಭವ’ ಎಂದರೆ ಅದು ಯುದ್ಧದಲ್ಲಿ ಗೆದ್ದದ್ದಲ್ಲ. `ಸಾಮ್ರಾಜ್ಯಗಳನ್ನು’, `ಗುಡಿಗೋಪುರಗಳನ್ನು’ ಕಟ್ಟಿದ್ದು ಅಲ್ಲ. ವಿಶೇಷವಾಗಿ `ಹಣಕಾಸಿನ ಸಾಮ್ರಾಜ್ಯ’ಗಳನ್ನು ಕಟ್ಟಿದ್ದು ಅಲ್ಲ. ಬದಲಿಗೆ ಮಾನವನ ಪರಿಸ್ಥಿತಿಗಳನ್ನು ಸುಧಾರಣೆಗೊಳಿಸುವುದಾಗಿದೆ. `ಆರೋಗ್ಯ’ವು ನಾಗರಿಕತೆಯ ಯಶಸ್ಸಿನ ಒಂದು ಪ್ರಾಂಗಣವಾಗಿದೆ. ಇಂತಹ ಸಾಧನೆಗೈದ ಮಹಾನುಭಾವರೇ ಜಗತ್ತೆಂಬ ಸಾಗರದ ನೈಜ ನಾವಿಕರು.










