ಕೋಲಾರ: ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಇಬ್ಬರು ಪೇದೆಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಅರೋಪಿಗಳನ್ನ ವಿಚಾರಣೆ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆಂದು ಮುಳಬಾಗಿಲು ಡಿವೈಎಪ್‌ಪಿ ನಂದ ಕುಮಾರ್ ವರದಿಯನ್ನು ನೀಡಿದ್ದರು. ಈ ವರದಿ ಆಧರಿಸಿ, ಪಿಎಸ್ಐ ಪ್ರದೀಪ್ ಸಿಂಗ್, ಪೊಲೀಸ್ ಪೇದೆಗಳಾದ ಮಂಜುನಾಥ್, ಮಹಾಂತೇಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮುನಿರಾಜು ಮತ್ತು ಬಾಲಾಜಿ ಎಂಬ ಯುವಕರನ್ನು ವಿಚಾರಣೆಗೆಂದು ಸೆಪ್ಟೆಂಬರ್ 17ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಪೊಲೀಸರು ಆರೋಪಿಗಳನ್ನು 15 ದಿನಗಳ ಕಾಲ ಪೊಲೀಸ್ ಠಾಣೆ ಮತ್ತು ಬೇರೆ ಬೇರೆ ಸ್ಥಳಗಳಲ್ಲಿರಿಸಿ ಅಕ್ರಮವಾಗಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆಂಧ್ರದ ಮದನಪಲ್ಲಿ ನಿವಾಸಿ ಮುನಿರಾಜು ಮೃತಪಟ್ಟಿದ್ದನು. ಪರಿಣಾಮ ಪಿಎಸ್ಐ ಸೇರಿ ಇಬ್ಬರು ಪೊಲೀಸ್ ಪೇದೆಗಳ ವಿರುದ್ಧ ಪ್ರಕರಣ ದಾಖಲಾದ ಕಾರಣ ಇವರನ್ನು ಕೋಲಾರ ಎಸ್‍ಪಿ ನಾರಾಯಣ ಅಮಾನತು ಮಾಡಿದ್ದಾರೆ.










