ಅಮರಾವತಿ : ಕೊರೊನಾ ಮಹಾಮಾರಿಗೆ ಅದೆಷ್ಟೋ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಂತಹ ಮಕ್ಕಳ ಭವಿಷ್ಯಕ್ಕಾಗಿ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ದೆಹಲಿ ಹಾಗೂ ಮಧ್ಯಪ್ರದೇಶ ಸರ್ಕಾರದ ನಂತರ ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ, ಕೊರೊನಾ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡಿರುವ ಪ್ರತಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಹಣವನ್ನು ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ (ಎಫ್ ಡಿ) ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಕೋವಿಡ್ ಎರಡನೇ ಅಲೆಯ ವಿರುದ್ಧದ ಹೋರಾಟವು ಅನೇಕ ಮಕ್ಕಳನ್ನು ಅಸುರಕ್ಷಿತ ಮತ್ತು ದುರ್ಬಲರನ್ನಾಗಿ ಮಾಡಿದೆ. ಅದರಲ್ಲೂ ಮಹಾಮಾರಿ ವೈರಸ್ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಅಪಾಯದಲ್ಲಿದೆ ಎಂದು ಅರ್ಥಮಾಡಿಕೊಂಡ ಅಂಧ್ರಪ್ರದೇಶ ಸರ್ಕಾರ, ಪ್ರತಿ ಮಗುವಿಗೆ 10 ಲಕ್ಷ ರೂ. ಹಣವನ್ನು ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಇನ್ನೂ ಈ ಕುರಿತು ಬ್ಯಾಂಕ್ ಗಳ ಜತೆ ಮಾತುಕತೆ ನಡೆಸುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದು, ಮಗುವಿಗೆ 25 ವರ್ಷ ತುಂಬುವವರೆಗೆ ಈ ಮೊತ್ತವು ಫಿಕ್ಸೆಡ್ ಡೆಪಾಸಿಟ್ ಇರುತ್ತದೆ. ಈ ಠೇವಣಿಯಯಿಂದ ಆ ಮಗುವನ್ನು ಸಾಕುವವರಿಗೆ ಅಥವಾ ಪಾಲಕರಿಗೆ ಹೆಚ್ಚಿನ ಬಡ್ಡಿ ಒದಗಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.










