ಕೋವಿಡ್ ಹೆಚ್ಚಳ.. ಆಸ್ಪತ್ರೆಗಳಲ್ಲಿ ಜೀವರಕ್ಷಕ ಸಾಧನಗಳ ಲಭ್ಯತೆ ಖಚಿತಪಡಿಸಿಕೊಳ್ಳಿ : ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ…

75
firstsuddi

ನವದೆಹಲಿ : ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮುಂದೆ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಆಕ್ಸಿಜನ್, ಸಿಲಿಂಡರ್ ಗಳ ಸಾಕಷ್ಟು ದಾಸ್ತಾನು ಮತ್ತು ವೆಂಟಿಲೇಟರ್ ಗಳಂತಹ ಜೀವರಕ್ಷಕ ಸಾಧನಗಳು ಲಭ್ಯವಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ, ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ, ಮುಂದೆ ಎದುರಾಗುವ ಯಾವುದೇ ಸಂದರ್ಭಗಳನ್ನು ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ನಾವು ಈಗಿನಿಂದಲೇ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಎಲ್ಲಾ ಕ್ಲಿನಿಕಲ್ ಸೆಟ್ಟಿಂಗ್ ಗಳಲ್ಲಿ ವೈದ್ಯಕೀಯ ಆಮ್ಲಜನಕವು ಪ್ರಮುಖವಾಗಿದೆ. ವಿಶೇಷವಾಗಿ ಸಾಂಕ್ರಾಮಿಕ ನಿರ್ವಹಣೆಯ ಸಮಯದಲ್ಲಿ ಮತ್ತು ರೋಗಿಗಳ ಆರೈಕೆ ಮತ್ತು ಕೋವಿಡ್-19 ನಿರ್ವಹಣೆಯ ಸಮಯದಲ್ಲಿ ಜೀವಗಳನ್ನು ಉಳಿಸಲು ಆಮ್ಲಜನಕ ಪೂರೈಕೆ ನಿರ್ಣಾಯಕವಾಗಿದೆ. ಹಾಗಾಗಿ ಈ ಬಗ್ಗೆ ಗಮನಹರಿಸಿ ಸೂಚನೆ ನೀಡಿದರು.