ಕೌಟುಂಬಿಕ ಕಲಹ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಆತ್ಮಹತ್ಯೆ…

45
firstsuddi

ಹಾಸನ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಪತ್ನಿ ಬದುಕಿದ್ದು, ಪತಿ ಸಾವನ್ನಪ್ಪಿದ್ದಾನೆ. ಪ್ರಶಾಂತ್ ಕುಮಾರ್ ಮೃತ ದುರ್ದೈವಿ. ಬಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿ.

ಘಟನೆಯ ವಿವರ:-ಕೌಟುಂಬಿಕ ಕಲಹದಿಂದ ಬಿಂದು ಪತಿಯಿಂದ ದೂರವಾಗಿ ತನ್ನ ತವರು ಮನೆ ಸೇರಿದ್ದಳು. ತನ್ನನ್ನು ಬಿಟ್ಟು ತವರು ಮನೆ ಸೇರಿದ್ದ ಪತ್ನಿ ಮೇಲಿನ ಸಿಟ್ಟಿನಿಂದ ಆಕೆ ಇದ್ದಲ್ಲಿಗೇ ಬಂದ ಪತಿರಾಯ, ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮನೆ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಕುಡುಗೋಲಿನಿಂದ ಹೆಂಡತಿಯ ಕುತ್ತಿಗೆ ಕೊಯ್ದು ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿ ಗಂಡನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ನಶೆಯಲ್ಲಿದ್ದ ಪತಿ, ತನ್ನ ಪತ್ನಿಯನ್ನ ಕೊಲೆ ಮಾಡಿದ್ದೇನೆಂದು ಹೆದರಿ ಪತ್ನಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಇತ್ತ ಬಿಂದು ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೊಳೆನರಸೀಪುರ ನಗರ ಪೊಲೀಸರು ಭೇಟಿ ನೀಡಿ ಮೃತ ಪ್ರಶಾಂತ್ ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.