ಚಿಕ್ಕಮಗಳೂರು : ಕಾಲಲ್ಲಿ ಚಪ್ಪಲಿ ಇಲ್ಲ. ನಡೆಯೋಕೆ ದಾರಿ ಇಲ್ಲ. ಆದರೂ ಬೆಟ್ಟದ ತಾಯಿಯನ್ನ ನೋಡೋ ಕಾತರ. ಬೆಟ್ಟದ ತುದಿಯಲ್ಲಿರೋ ಚಿಕ್ಕಮಗಳೂರಿನ ದೇವಿರಮ್ಮನ ದರ್ಶನಕ್ಕಾಗಿ ಬಂದ ಭಕ್ತರ ಸಂಖ್ಯೆ ಸಾವಿರಾರು. 3800 ಅಡಿಯಷ್ಟು ಎತ್ತರದ ಗುಡ್ಡದಲ್ಲಿರೋ ಆ ದೇವಿಯನ್ನ ನೋಡಲು ಚಳಿ-ಮಳೆಯನ್ನೂ ಲೆಕ್ಕಿಸದೇ ಜನಸಾಗರವೇ ಹರಿದು ಬಂದಿದೆ. ಬರಿಗಾಲಲ್ಲಿ ಕಾಡು-ಮೇಡು ಅಲೆದು ಭಕ್ತರು ದೇವಿ ದರ್ಶನ ಮಾಡಿದ್ದಾರೆ. 4 ದಿನಗಳ ಕಾಲ ನಡೆಯೋ ಜಾತ್ರೆಗೆ ಇಂದೇ ಆರಂಭ. ರಾಜ್ಯ-ಹೊರರಾಜ್ಯದಿಂದಲೂ ಆಗಮಿಸಿರೋ ಸಹಸ್ರಾರು ಭಕ್ತರು ದೇವಿ ಕೃಪೆಗೆ ಪಾತ್ರರಾಗ್ತಿದ್ದಾರೆ. 20 ಸಾವಿರಕ್ಕೂ ಅಧಿಕ ಭಕ್ತರು ತಾಯಿ ದರ್ಶನ ಮಾಡಿ ಪುನೀತರಾಗಿದ್ದಾರೆ.

ಹೀಗೆ ಬೆಟ್ಟಗಳ ಸಾಲಲ್ಲಿ ಇರುವೆಯಂತೆ ಸಾಗ್ತಿರೋ ಇವರೆಲ್ಲಾ ದೇವಿರಮ್ಮನ ಭಕ್ತರು. ವರ್ಷಕ್ಕೊಮ್ಮೆ ದರ್ಶನ ಕೊಡೋ ಬೆಟ್ಟದ ತಾಯಿಯನ್ನ ಕಾಣ ಬಂದಿರೋ ಜನಸಾಗರ. ಕಳೆದ ವರ್ಷ 70 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿ ಜಗನ್ಮಾತೆಯ ದರ್ಶನ ಮಾಡಿದ್ರು. ಈ ವರ್ಷ ಮಳೆ, ಬೆಟ್ಟದಲ್ಲಿ ಅತಿಯಾದ ಜಾರುವಿಕೆಯ ಮಧ್ಯೆಯೂ 20 ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ. ದೀಪಾವಳಿ ಅಮವಾಸೆಯ ಹಿಂದಿನ ದಿನ ಬೆಟ್ಟದಲ್ಲಿರೋ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬೆಟ್ಟ ಹತ್ತಿ ತಾಯಿಯ ದರ್ಶನ ಮಾಡ್ತಾರೆ. ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬಂದೇ ಬರ್ತಾರೆ. ವಿದ್ಯುತ್ ಸಂಪರ್ಕ ಕೂಡ ಇಲ್ಲದ ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಹಿಂದಿನ ರಾತ್ರಿಯೇ ಹತ್ತುತ್ತಿದ್ರು. ಆದ್ರೆ, ಈ ವರ್ಷ ಅತಿಯಾದ ಮಳೆ, ಮಣ್ಣಿನ ಜಾರುವಿಕೆಯಿಂದ ಕತ್ತಲಲ್ಲಿ ಬೇಡವೆಂದು ಬೆಳಗ್ಗೆ ಬೆಟ್ಟ ಹತ್ತುದ್ರು 20 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಏರಿದ್ದಾರೆ.

ಇಲ್ಲಿ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸ್ತಾರೆ. ಸಮುದ್ರಮಟ್ಟದಿಂದ 3800 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯೋದು. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು. ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನ ಆಚರಿಸೋದು. ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧವಿತ್ತು. ಯಾವಾಗ ಅರಮನೆ ಸರ್ಕಾರದ ಅಧೀನಕೊಳಪಡ್ತೋ ಅಂದಿನಿಂದ ಅರಮನೆಯಿಂದ ದೇವಾಲಯಕ್ಕೆ ಬರ್ತಿದ್ದ ಎಣ್ಣೆ, ಸೀರೆ ನಿಂತಿದೆ.

ಈ ಬೆಟ್ಟದ ತಾಯಿಯನ್ನ ನೋಡೋಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವನ್ನ ಸವಿಯೋಕೆ ಬರೋರು ಉಂಟು, ಪ್ರೇಮಿಗಳು ಉಂಟು, ಕಷ್ಟವನ್ನ ಪರಿಹರಿಸೆ ತಾಯಿ ಅಂತ ಬೇಡೋರು ಉಂಟು, ಬೆಟ್ಟ ಹತ್ತಿ ಎಂಜಾಯ್ ಮಾಡೋರು ಇದ್ದಾರೆ. ಆದ್ರೆ, ಆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರೋ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತವಾಗದಂತೆ ಕಾಯ್ತಿದ್ದಾಳೆ.










