ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರ ಪಾಸ್‌ಪೋರ್ಟ್ ನವೀಕರಿಸಲು ಸಾಧ್ಯವಿಲ್ಲ: ಹೈಕೋರ್ಟ್

63
firstsuddi

ಬೆಂಗಳೂರು: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್‌ಪೋರ್ಟ್ ನೀಡುವುದು, ನವೀಕರಣ ಅಥವಾ ಮರು ವಿತರಣೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ನಿಯಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಸಂತೋಷಬೀಜಾಡಿ ಶ್ರೀನಿವಾಸ ಅವರ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, “ವ್ಯಕ್ತಿಯ ಕ್ರಿಮಿನಲ್ ಮೊಕದ್ದಮೆಯನ್ನು ಪರಿಗಣಿಸದೆ ಆತನಿಗೆ ಪಾಸ್‌ಪೋರ್ಟ್‌ನ ವಿತರಣೆ ಅಥವಾ ನವೀಕರಣ/ಮರು ನೀಡುವಂತೆ ಪಾಸ್‌ಪೋರ್ಟ್ ಕಾಯ್ದೆಯಲ್ಲಿ ಎಲ್ಲಿಯೂ ಹೇಳಿಲ್ಲ” ಎಂದು ಹೇಳಿದರು.

ಸೆಕ್ಷನ್ 6(2)(ಎಫ್) ಅಡಿಯಲ್ಲಿ ಪಾಸ್‌ಪೋರ್ಟ್ ವಿತರಣೆಗೆ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮಗಳ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರಿಗೆ ಹೊಸ ಪಾಸ್‌ಪೋರ್ಟ್, ನವೀಕರಣ ಅಥವಾ ಮರು ವಿತರಣೆ ನೀಡುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆದಾಗ್ಯೂ, ಸಂತೋಷಬೀಜಾಡಿ ಶ್ರೀನಿವಾಸ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ನಡೆಸುತ್ತಿರುವ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ಅಲ್ಪಾವಧಿಯ ಪಾಸ್‌ಪೋರ್ಟ್ ಅನ್ನು ನೀಡುವಂತೆ ಕೋರಬಹುದು. ಆದರೆ ಸೆಷನ್ಸ್ ನ್ಯಾಯಾಲಯವು ಅಂತಹ ಅರ್ಜಿಯನ್ನು ಕಾಯ್ದೆಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ.