ಮಂಗಳೂರು : ಇಂಟರ್ನ್ ಶಿಪ್ ಮಾಡಲು ಬಂದಿದ್ದ ನಗರದ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿಗೆ ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಪಿಎಸ್ ಐ ಮತ್ತು ಹೆಡ್ ಕಾನ್ಸ್ ಟೇಬಲ್ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಉರ್ವ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಕಲಾ ಮತ್ತು ಹೆಡ್ ಕಾನ್ಸ್ ಟೇಬಲ್ ಪ್ರಮೋದ್ ಸಂತ್ರಸ್ತೆ ವಿದ್ಯಾರ್ಥಿನಿಯಿಂದ ಕಾನೂನು ಬಾಹಿರವಾಗಿ ಮುಚ್ಚಳಿಕೆ ಬರೆಸಿಕೊಂಡು ಹೆಬ್ಬೆಟ್ಟು ಸಹಿಯನ್ನು ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.
ಇನ್ನೂ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಜಾಗೃತ ಮಹಿಳಾ ವೇದಿಕೆಯ ಹೆಸರಿನಲ್ಲಿ ಪವಿತ್ರಾ ಆಚಾರ್ಯ ಎಂಬಾಕೆ ಸಂತ್ರಸ್ತೆಗೆ ನ್ಯಾಯ ಕೊಡಿಸುತ್ತೇನೆಂದು ಉರ್ವ ಪೊಲೀಸ್ ಠಾಣೆಗೆ ಕರಿಸಿ ಠಾಣೆಯಲ್ಲಿ ಸಂತ್ರಸ್ತೆ ಜೊತೆ ಸಂಧಾನ ವೇಳೆ ಬೆದರಿಸಿ ಸಂತ್ರಸ್ತೆಯರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಪವಿತ್ರಾ ಆಚಾರ್ಯ ಅವರನ್ನು ಬಂಧಿಸಿದ್ದಾರೆ.
ಇನ್ನು ಲೈಂಗಿಕ ಕಿರುಕುಳದ ಘಟನೆಯನ್ನು ಸಂತ್ರಸ್ತೆ ತನ್ನ ಗೆಳೆಯ ಧ್ರುವ ಎಂಬಾತನಿಗೆ ಹೇಳಿದ್ದಳು. ಆದರೆ, ಧ್ರುವ ಮತ್ತು ಆತನ ತಾಯಿ ರಾಜೇಶ್ ಬಳಿ ಮಾತನಾಡಿ ಸಂತ್ರಸ್ತೆಗೆ ದೂರು ನೀಡದಂತೆ ಬೆದರಿಸಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ ಮತ್ತು ಆತನ ತಾಯಿ ಮಹಾಲಕ್ಷ್ಮೀ ಕೂಡ ಅರೆಸ್ಟ್ ಆಗಿದ್ದಾರೆ.










