ಖ್ಯಾತ ಸಾಹಿತಿ ಎಂ.ಎಸ್ ಪ್ರಭಾಕರ ವಿಧಿವಶ…

56
firstsuddi

ಕೋಲಾರ : ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ಎಂ.ಎಸ್ ಪ್ರಭಾಕರ ಅವರು ನಿಧನರಾಗಿದ್ದಾರೆ. ಕೋಲಾರ ಮೂಲದ ಕಾಮರೂಪಿ ಎಂ.ಎಸ್.ಪ್ರಭಾಕರ ಅವರು ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ನಗರದ ಕಠಾರಿ ಪಾಳ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

1936ರಲ್ಲಿ ಹುಟ್ಟಿದ ಪ್ರಭಾಕರ ಅವರು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದರು. ಅಸ್ಸಾಂ ನಲ್ಲಿ ಪತ್ರಿಕೋದ್ಯಮ ಆರಂಭ ಮಾಡಿದ್ದ ಇವರು, ದಿ ಹಿಂದೂ ಪತ್ರಿಕೆ ಮೂಲಕ ನೆಲ್ಸನ್ ಮಂಡೇಲಾ ಅವರನ್ನ ಸಂದರ್ಶನ ಮಾಡಿದ ಏಕೈಕ ಕನ್ನಡ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬಹುಭಾಷಿಗರಾಗಿದ್ದ ಪ್ರಭಾಕರ್ ಕನ್ನಡದ ಸೃಜನಶೀಲ ಬರಹಗಾರರು. ಲುಕಿಂಗ್ ಬ್ಯಾಕ್ ಇಂಟು ದಿ ಪ್ಯೂಚರ್: ಐಡೆಂಟಿಟಿ ಆಂಡ್ ಇನ್ಸರ್ಜೆನ್ಸಿ ಇನ್ ನಾರ್ತ್ ಈಸ್ಟ್ ಇಂಡಿಯಾ ಎಂಬ ಪುಸ್ತಕದಲ್ಲಿ ಇವರು ಈಶಾನ್ಯ ಭಾರತದ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕೃತಿ ಕಾಮರೂಪಿ ಸಮಗ್ರವನ್ನು ಸಂಚಯ ಪುಸ್ತಕ ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕಾಮರೂಪಿ ಅವರಿಗೆ 2018ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ.

ಸದ್ಯ ಎಂ.ಎಸ್ ಪ್ರಭಾಕರ ಅವರ ಮೃತದೇಹವನ್ನು ಎಂ.ಎಸ್ .ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.