ಗಣರಾಜ್ಯೋತ್ಸವ ದಿನಾಚರಣೆ – ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ…

85
firstsuddi

ಬೆಂಗಳೂರು : ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಗಣತಂತ್ರ ದಿನದ ಆಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, 73ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 8:58ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸಲು ವೈದ್ಯರು, ನರ್ಸ್‌ಗಳು ಅವಿರತ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಉಂಟಾದ ಅತಿವೃಷ್ಟಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ 14 ಅಮೃತ ಮಹೋತ್ಸವ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. 2023ರ ಆಗಸ್ಟ್ 15ರವರೆಗೆ ಫಲಿತಾಂಶಗಳೊಂದಿಗೆ ಅನುಷ್ಠಾನ ಮಾಡಲಾಗಿದೆ. ಕಾರ್ಯಕ್ರಮ ಅನುಷ್ಠಾನ ಮಾರ್ಗಸೂಚಿ ಸರ್ಕಾರ ಸಿದ್ಧಪಡಿಸಿದೆ. ಕೃಷಿ ವಲಯದಲ್ಲಿ ಬದಲಾವಣೆ ತರಲು ಜಲಾನಯನ ಅಭಿವೃದ್ಧಿ ಮಾಡಲಾಗುತ್ತಿದೆ. ಜಲಾನಯನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನಹರಿಸಿದೆ. 2021-22ನೇ ಸಾಲಿನಲ್ಲಿ 1,472 ಕೋಟಿ ರೂ. ಕಾಮಗಾರಿ ಅನುಮೋದನೆ ನೀಡಲಾಗಿದೆ. ಮೊಬೈಲ್, ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ, ಸ್ಥಳೀಯ ಯುವಕರ ಮೂಲಕ ಅನುಷ್ಠಾನಗೊಳಿಸಲಾಗಿದೆ. 2021-22ನೇ ಸಾಲಿನಲ್ಲಿ 12,76,868 ರೈತರ ನೋಂದಣಿ ಮಾಡಲಾಗಿದೆ. 256.95 ಲಕ್ಷ ಪ್ರದೇಶ ಬೆಳೆ ಸಮೀಕ್ಷೆ ಅಡಿ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. 16,176 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ₹4.41 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2ನೇ ಅಲೆ ಲಾಕ್ಡೌನ್ ವೇಳೆ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. 11,82,307 ಕಾರ್ಮಿಕರಿಗೆ ತಲಾ ₹2,000 ಪರಿಹಾರ ನೀಡಲಾಗಿದೆ. ಇದಕ್ಕಾಗಿ 236.46 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅಸಂಘಟಿತ ಕಾರ್ಮಿಕರಿಗೆ ₹628.16 ಕೋಟಿ ಪರಿಹಾರ, 14,527 ಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. 18,777 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ, ಇದರಿಂದ 20,634 ಫಲಾನುಭವಿಗಳಿಗೆ ಪ್ರಯೋಜನವಾಗಿದೆ. 3,347 ಹೆಕ್ಟೇರ್ ಪ್ರದೇಶದಲ್ಲಿ ಸಂರಕ್ಷಿತ ಬೇಸಾಯ ಪದ್ಧತಿ ಮಾಡಲಾಗಿದೆ. 3,440 ಜೇನುಪೆಟ್ಟಿಗೆಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.