ಚಂಡೀಗಢ: ಗಣೇಶ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 7 ಮಂದಿ ಮೃತಪಟ್ಟಿರುವ ಘಟನೆ ಹರಿಯಾಣದಲ್ಲಿ ನಿನ್ನೆ ಸಂಜೆ ನಡೆದಿದೆ.
ಘಟನೆಯಲ್ಲಿ ಸೋನಿಪತ್ ನಲ್ಲಿ ಮೂವರು ಹಾಗೂ ಮಹೇಂದ್ರಗಢದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 31 ರಂದು ಆರಂಭವಾದ ಗಣೇಶ ಚತುರ್ಥಿ ಹಬ್ಬ 10 ದಿನಗಳ ಬಳಿಕ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅಂತ್ಯಗೊಂಡಿತು.
ಮಹೇಂದರ್ ಗಢದಲ್ಲಿ 7 ಅಡಿಯ ಗಣೇಶ ವಿಸರ್ಜನೆ ಮಾಡುವಾಗ 9 ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ರಾಷ್ಟ್ರೀಯ ವಿಪತ್ತು ನಿಗ್ರಹ ದಳದ ನೆರವಿನೊಂದಿಗೆ ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡು, 5 ಮಂದಿ ಯುವಕರನ್ನು ರಕ್ಷಿಸಿದೆ. ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ ಸೋನಿಪತ್ ನ ಮಿಮಾರ್ ಪುರ ಘಾಟ್ ಗೆ ತಮ್ಮ ಮಗ ಮತ್ತು ಸೋದರಳಿಯನೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.










