ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕೊಯಮತ್ತೂರು ಡಿಐಜಿ.

52
firstsuddi

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಪೊಲೀಸ್ ಉಪ ಮಹಾನಿರೀಕ್ಷಕ ವಿಜಯಕುಮಾರ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಬೆಳಗ್ಗೆ ಸುಮಾರು 6:15ರ ವೇಳೆಗೆ ವಿಜಯಕುಮಾರ್ ರೇಸ್ ಕೋರ್ಸ್ ಬಳಿಯ ರೆಡ್ ಫೀಲ್ಡ್ಸ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ಗನ್‌ಮ್ಯಾನ್‌ನಿಂದ ಪಿಸ್ತೂಲ್ ಅನ್ನು ಪಡೆದು ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಕುಮಾರ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರಿಗೆ ಕೌನ್ಸೆಲಿಂಗ್ ಕೂಡಾ ನಡೆಯುತ್ತಿತ್ತು ಹಾಗೂ ಕೆಲ ದಿನಗಳ ಹಿಂದಷ್ಟೇ ಅವರ ಕುಟುಂಬವನ್ನು ಚೆನ್ನೈಯಿಂದ ಕೊಯಮತ್ತೂರಿಗೆ ಕರೆತರಲಾಗಿತ್ತು.

2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಅವರು ಈ ವರ್ಷದ ಜನವರಿಯಲ್ಲಿ ಕೊಯಮತ್ತೂರು ವ್ಯಾಪ್ತಿಯ ಡಿಐಜಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಅಣ್ಣಾನಗರದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.