ಗುಜರಾತ್ ಗಲಭೆ ಪ್ರಕರಣ ; ಪ್ರಧಾನಿ ಮೋದಿಗೆ ಸುಪ್ರೀಂನಿಂದ ಕ್ಲೀನ್ ಚಿಟ್.

58
firstsuddi

ನವದೆಹಲಿ : ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸುಪ್ರೀಂಕೋರ್ಟ್ ನಿಂದ ಕ್ಲೀನ್ ಚಿಟ್ ಸಿಕ್ಕಿದೆ.

ಗುಜರಾತ್ ನ ಗೋಧ್ರಾ ನರಮೇಧ ನಂತರ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ್ದ ಎಸ್ ಐಟಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರಿಗೆ ಕ್ಲೀನ್ ಚಿಟ್ ನೀಡಿತ್ತು. ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಹಿಂಸಾಚಾರದ ವೇಳೆ ಹತ್ಯೆಗೀಡಾದ ಸಂಸದ ಇಸಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿಟಿ ರವಿಕುಮಾರ್ ಅವರಿದ್ಧ ಪೀಠ ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿದೆ.

ಏನಿದು ಪ್ರಕರಣ?
2002ರ ಫೆಬ್ರವರಿ 22 ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್ 6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತ್ ಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಘಟನೆ ಬಳಿಕ ಗುಜರಾತಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು. ಇದರಲ್ಲಿ ಇಸಾನ್ ಜಫ್ರಿ ಸೇರಿ 68 ಮಂದಿ ಹತರಾಗಿದ್ದರು. ಇದರ ಹಿಂದೆ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.