ಗುಜರಾತ್ ವಿಧಾನಸಭೆ ಚುನಾವಣೆ : ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ.

57
firstsuddi

ಅಹಮದಾಬಾದ್ : ಗುಜರಾತ್ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಭೂಪೇಂದ್ರ ಪಟೇಲ್ ಸಮ್ಮುಖದಲ್ಲಿ ‘ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಜೆ.ಪಿ ನಡ್ಡಾ ಮಹಿಳೆಯರನ್ನು ಸ್ವಾವಲಂಬಿ ಮಾಡುವುದು ನಮ್ಮ ಗುರಿ ಎಂದರು.

ಸಂಕಲ್ಪ ಪತ್ರದಲ್ಲಿ ಪ್ರಧಾನ ಮಂತ್ರಿ ಆರೋಗ್ಯ ವಿಮೆ ಯೋಜನೆಯನ್ನು 5 ರಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು, ನೀರಾವರಿ ಯೋಜನೆಯಲ್ಲಿ 25 ಸಾವಿರ ಕೋಟಿ ವರೆಗೆ ಹೂಡಿಕೆ ಮಾಡಲಾಗುವುದು, 25 ಬಿರ್ಸಾ ಮುಂಡಾ ವಸತಿ ಶಾಲೆಗಳನ್ನು ತೆರೆಯಲಾಗುವುದು. 5 ವರ್ಷದಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು, 2ಸಿ ಫುಡ್ ಪಾರ್ಕ್ ಸ್ಥಾಪಿಸಲಾಗುವುದು, 5 ವರ್ಷಗಳಲ್ಲಿ ಮಹಿಳೆಯರಿಗೆ 1 ಲಕ್ಷ ಉದ್ಯೋಗ ನೀಡಲಾಗುವುದು, ಏಕರೂಪ ನಾಗರಿಕ ಸಂಹಿತೆ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದೆ.

ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.