ಗುಲಾಂ ನಬಿ ಆಜಾದ್ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ತೊರೆದ ಐವರು ಶಾಸಕರು.

102
firstsuddi

ನವದೆಹಲಿ : ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪಕ್ಷದ ಐವರು ಮಾಜಿ ಶಾಸಕರು ಪಕ್ಷ ತೊರೆದಿದ್ದಾರೆ.

ಜಮ್ಮು ಕಾಶ್ಮೀರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜಿಎಂ ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ ಮತ್ತು ಚೌಧರಿ ಮೊಹಮ್ಮದ್ ಅಕ್ರಮ್ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಇಂದು ಬೆಳಗ್ಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ. ಅಲ್ಲದೇ ರಾಹುಲ್ ಗಾಂಧಿಯವರ ವರ್ತನೆ ಚಿಕ್ಕ ಮಕ್ಕಳಂತೆ ಇದೆ. ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗಿದೆ ಎಂದು ಸೋನಿಯಾ ಗಾಂಧಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ಉಲ್ಲೇಖಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಗುಲಾಂ ನಬಿ ಆಜಾದ್ ಅವರು ಹೊಸ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.