ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣವಂತರಾಗಬೇಕು : ಕೆ.ಸಿ.ಗುಣಶೇಖರ್.

73
firstsuddi

ಚಿಕ್ಕಮಗಳೂರು : ಕೆಳವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಆ ಸಮುದಾಯದ ಜನ ಶಿಕ್ಷಣವಂತರಾಗಬೇಕು ಎಂದು ಬಿಲ್ಲವ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ಗುಣಶೇಖರ್ ಹೇಳಿದರು.

ನಗರದ ಬಿಲ್ಲವ ಸಮಾಜ ಸೇವಾ ಸಂಘದ ಕಛೇರಿಯಲ್ಲಿ ನಿನ್ನೆ ಸಮುದಾಯದ ಸಾಧಕರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಳವರ್ಗಗಳ ಜನ ಅನಕ್ಷರಸ್ಥರಾಗಿರುವುದರಿಂದಾಗಿ ಆ ಸಮುದಾಯಗಳು ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆಗೊಳಗಾಗಿವೆ, ಆ ವರ್ಗಗಳ ಜನ ಸಾಕ್ಷರರಾದರೆ ಅವು ಅಭಿವೃದ್ದಿ ಹೊಂದುತ್ತವೆ ಎಂದು ಕಿವಿಮಾತು ಹೇಳಿದರು.

ಬಿಲ್ಲವ ಸಮುದಾಯದವರು ಈ ಸತ್ಯವನ್ನು ಅರಿಯಬೇಕು ತಮ್ಮ ಮಕ್ಕಳನ್ನು ಎಷ್ಟೇ ಕಷ್ಟವಾದರೂ ಬಿಡದೆ ಶಿಕ್ಷಣವಂತರನ್ನಾಗಿ, ಸಾಧಕರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಪಾತ್ರರಾದ ಪುಷ್ಪಾಂಜಲಿ ಮೋಹನ್ ಮತ್ತು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಕೋಟ್ಯಾನ್ ಅವರನ್ನು ಸಮಾರಂಭದಲ್ಲಿ ಬಿಲ್ಲವ ಸಮಾಜಸೇವಾ ಸಂಘ, ಮಹಿಳಾ ಸಂಘ ಮತ್ತು ಯುವ ವೇದಿಕೆಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಬಿಲ್ಲವ ಸಮಾಜಸೇವಾ ಸಂಘದ ಉಪಾಧ್ಯಕ್ಷ ಕೆ.ನಾರಾಯಣ್, ಮಾಜಿ ಅಧ್ಯಕ್ಷ ಕೆ.ರಾಜು, ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಿಮಾ, ಯುವವೇದಿಕೆ ಅಧ್ಯಕ್ಷ ವಿನೋದ್ ಕುಮಾರ್ ಉಪಸ್ಥಿತರಿದ್ದರು.