ಹುಬ್ಬಳ್ಳಿ/ಮೈಸೂರು : ಉರ್ದು ಮಾತನಾಡಲು ಬರದಿದ್ದಕ್ಕೆ ಚಂದ್ರು ಹತ್ಯೆ ಆಗಿದೆ ಎಂದು ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೋಮ್ ಮಿನಿಸ್ಟರ್ ಗೆ ಅನುಭವವೇ ಇಲ್ಲ. ಗೃಹ ಇಲಾಖೆ ಹ್ಯಾಂಡಲ್ ಮಾಡುವುದಕ್ಕೆ ಬರಲ್ಲ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೊತ್ತಿಗೆ ಯಾಕ್ ಹೋಗಿದ್ದರು ಎಂಬ ಹೇಳಿಕೆ ನೀಡಿದ್ದರು. ಅವರು ಹೋಮ್ ಮಿನಿಸ್ಟರ್ ಆಗುವುದಕ್ಕೆ ನಾಲಾಯಕ್ ಎಂದು ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಸಹ ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಹತ್ಯೆ ನಾನು ಖಂಡಿಸುತ್ತೆನೆ. ಹಿಂದೂ ಸತ್ತರು ಜೀವ, ಮುಸ್ಲಿಂ ಸತ್ತರು ಜೀವವೇ. ಹರ್ಷ ಕೊಂದವರನ್ನು ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ ಎಂದು ಕಿಡಿಕಾರಿದರು.
ಇನ್ನೂ ಆರಗ ಜ್ಷಾನೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಹೇಳಿಕೆ ನೀಡುತ್ತಿರುವ ಅರಗ ಜ್ಞಾನೇಂದ್ರ ಅವರು ಕಾಮಿಡಿ ರೋಲ್ ಮಾಡಲು ಗೃಹ ಸಚಿವರಾಗಿದ್ದಾರಾ? ಅಥವಾ ವಿಲನ್ ರೋಲ್ ಮಾಡುತ್ತೀದ್ದಿರಾ? ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಯುವಕನ ಕೊಲೆಯ ಬಗ್ಗೆ ಮಾತನಾಡುವಾಗ ಸಂಪೂರ್ಣವಾಗಿ ಮಾಹಿತಿ ತೆಗೆದುಕೊಂಡು ಗೃಹ ಸಚಿವರು ಮಾತನಾಡಬೇಕು. ಕೊಲೆಯಾದ ಚಂದ್ರು ದಲಿತ ಸಮಾಜದ ಯುವಕ ಅಂತಾ ಗೃಹ ಸಚಿವರು ಹೇಳಿದ್ದಾರೆ. ಆದರೆ, ಇಂದು ನೀಡುತ್ತಿರುವ ಹೇಳಿಕೆಗಳು ಅವರ ಸಣ್ಣತನವನ್ನು ತೋರಿಸುತ್ತದೆ. ಇದು ಸಮಾಜಕ್ಕೆ ಬೇರೆ ಸಂದೇಶ ಕೊಡುವ ರೀತಿಯಲ್ಲಿ ಹೇಳಿಕೆ ನೀಡಿದಂತಾಗುತ್ತದೆ. ಜೊತೆಗೆ ತನಿಖೆಗೂ ತೊಂದರೆಯಾಗುತ್ತದೆ ಎಂದು ಗೃಹ ಸಚಿವರ ಹೇಳಿಕೆಯನ್ನ ಖಂಡಿಸಿದರು.
ಮುಖ್ಯಮಂತ್ರಿಗಳ ಮೌನ ರಾಜ್ಯದಲ್ಲಿ ಅನಾಹುತ ಮಾಡುತ್ತದೆ. ಗೃಹಸಚಿವರ ಹೇಳಿಕೆಯಿಂದ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಹಾಳಾಗುತ್ತಿದೆ. ಇದರಲ್ಲಿ ನಾನು ಯಾವುದೇ ಸಮಾಜದ ಓಲೈಕೆ ಮಾಡುತ್ತಿಲ್ಲ. ರಾಜ್ಯದ ಎಲ್ಲ ಜನರೂ ನನಗೆ ಮುಖ್ಯ. ಆದ್ದರಿಂದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮತ್ತೆ ಸಿಎಂ ಆಗುವ ಆಸೆ ಇಲ್ಲ. ನನಗೆ ಪೂರ್ಣ ಬಹುಮತ ಸಿಗದಿರಬಹುದು. ಆದರೆ, ದೇವರ ದಯೆಯಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ರಾಜ್ಯದ ಜನರ ಹಿತಕ್ಕಾಗಿ ಮಾತನಾಡುತ್ತೇನೆ ಅಷ್ಟೇ ಎಂದರು.










