ಗೋಲ್ ಗುಂಬಜ್ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಸಂದೇಶ…

40
firstsuddi

ವಿಜಯಪುರ: ಭಾರತೀಯ ಪುರಾತತ್ವ ಇಲಾಖೆಯ ಆಧೀನದಲ್ಲಿರುವ ಗೋಲ್ ಗುಂಬಜ್ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಅಪರಿಚಿತ ಖಾತೆಯಿಂದ ಬೆದರಿಕೆಯೊಡ್ಡಲಾಗಿದೆ.

ಇ-ಮೇಲ್ ನಲ್ಲಿ ವಸ್ತುಸಂಗ್ರಹಾಲಯದೊಳಗೆ ಬಾಂಬ್ ಇಡಲಾಗಿದೆ ಎಂದು ಬರೆಯಲಾಗಿದೆ. ಬೆದರಿಕೆ ಬರುತ್ತಿದ್ದಂತೆಯೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ತಲುಪಿಸಿದ್ದು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಂಬ್ ಪತ್ತೆ ದಳದೊಂದಿಗೆ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಆದರೂ ಅದು ಯಾರೋ ದುಷ್ಕರ್ಮಿಗಳು ಕಳುಹಿಸಿದ್ದ ಹುಸಿ ಮೇಲ್ ಎಂಬುದು ನಂತರ ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರು, ಈ ವಿಚಾರವಾಗಿ ನಗರದ ಗೋಲಗುಂಬಜ್ ಆವರಣದಲ್ಲಿರುವ ಮ್ಯೂಸಿಯಂನಲ್ಲಿ ತಪಾಸನೆ ಮಾಡಲಾಗಿದೆ. ಯಾವುದೇ ಸ್ಪೋಟಕ ಕಂಡು ಬಂದಿಲ್ಲ. ಸಾರ್ವಜನಿಕರು ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೊಂದು ಹುಸಿ ಬಾಂಬ್ ಬೆದರಿಕೆ ಆಗಿದೆ. ಕಿಡಿಗೇಡಿಗಳು ದೇಶದ ಮ್ಯೂಸಿಯಂಗಳಲ್ಲಿ ಬಾಂಬ್ ಇಟ್ಟಿದ್ದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿದ್ದು ಸುಳ್ಳು ವದಂತಿ. ಮುಂಜಾಗೃತಾ ಕ್ರಮವಾಗಿ ನಗರದ ಗೋಲಗುಂಬಜ್ ಆವರಣದ ಮ್ಯೂಸಿಯಂನಲ್ಲಿ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳ ತಪಾಸನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.