ಗೋಲ್ಡನ್ ಟೆಂಪಲ್ ಬಳಿ ಮೂರನೇ ಬಾರಿಗೆ ಸ್ಫೋಟ – ಐವರು ಆರೋಪಿಗಳ ಬಂಧನ…

61
firstsuddi

ಚಂಡೀಗಢ: ಗೋಲ್ಡನ್ ಟೆಂಪಲ್ ಬಳಿ ನಿನ್ನೆ ತಡರಾತ್ರಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಈ ಸ್ಫೋಟ ಸಂಭವಿಸಿತ್ತು. ಗೋಲ್ಡನ್ ಟೆಂಪಲ್ ಬಳಿ ಕಳೆದ ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ ಇದಾಗಿತ್ತು.

ಮೊದಲ ಸ್ಫೋಟ ಮೇ 6 ರಂದು ಮತ್ತು ಎರಡನೆಯ ಸ್ಫೋಟ ಮೇ 8 ರಂದು ಸಂಭವಿಸಿತ್ತು. ಮೇ 6 ರಂದು ನಡೆದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದರು. ಘಟನೆಯಲ್ಲಿ ಅಕ್ಕಪಕ್ಕದ ಕೆಲವು ಕಟ್ಟಡಗಳ ಕಿಟಕಿ ಗಾಜುಗಳು ಒಡೆದಿದ್ದವು. ಆರೋಪಿಗಳು ಈ ಮೂರು ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಪಂಜಾಬ್ ಪೊಲೀಸರು ಘಟನೆ ನಡೆದ ಸ್ಥಳದಿಂದ ಸ್ಫೋಟಕ್ಕೆ ಬಳಸಲಾದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.