ಮೈಸೂರು : ಯುವ ದಸರಾ ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿರುದ್ಧ ಸಚಿವ ವಿ. ಸೋಮಣ್ಣ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಯುವ ದಸರಾ ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಕ್ಷಮ್ಯ ಅಪರಾಧ. ತಪ್ಪು ಮಾಡಿರುವ ಅವರಿಬ್ಬರಿಗೂ ಇನ್ನೂ 6 ತಿಂಗಳಲ್ಲಿ ದೇವಿಯೇ ಶಿಕ್ಷೆ ನೀಡುತ್ತಾಳೆ. ಈ ರೀತಿ ಆಗುತ್ತದೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಇದಕ್ಕೆಲ್ಲಾ ದಸರಾ ಉಪಸಮಿತಿ ಕಾರಣವಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೆ ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಅಡಿಯಲ್ಲಿ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಚಂದನ್ ಶೆಟ್ಟಿಯನ್ನು ಸುಸಂಸ್ಕೃತ ವ್ಯಕ್ತಿ ಅಂದುಕೊಂಡಿದ್ದೆ. ಸಾಂಪ್ರದಾಯಿಕ ಮತ್ತು ಪಾರಂಪರಿಕಾ ವೇದಿಕೆಯನ್ನು ಚಂದನ್ ಶೆಟ್ಟಿ ಈ ರೀತಿ ದುರ್ಬಳಕೆ ಮಾಡಬಾರದಿತ್ತು ಎಂದರು.










