ಚರ್ಮದಿಂದ ಚರ್ಮ ಸ್ಪರ್ಶವಾಗದಿದ್ದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ : ಬಾಂಬೆ ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂಕೋರ್ಟ್.

90
firstsuddi

ನವದೆಹಲಿ : ಚರ್ಮದಿಂದ ಚರ್ಮ ಸ್ಪರ್ಶವಾಗದಿದ್ದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಬಾಂಬೆ ಹೈಕೋರ್ಟ್ ಆದೇಶವನ್ನ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾ. ಉದಯ್ ಉಮೇಶ್ ಲಲಿತ್, ನ್ಯಾ. ಎಸ್ ರವೀಂದ್ರ ಭಟ್ ಮತ್ತು ನ್ಯಾ. ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠವು, ಪೋಕ್ಸೊ ಅಡಿಯಲ್ಲಿ ‘ಲೈಂಗಿಕ ದೌರ್ಜನ್ಯ’ದ ಅಪರಾಧದ ಅಂಶವು ಲೈಂಗಿಕ ಉದ್ದೇಶವಾಗಿದೆ ಮತ್ತು ಅಂತಹ ಘಟನೆಗಳಲ್ಲಿ ಚರ್ಮದಿಂದ ಚರ್ಮದ ಸಂಪರ್ಕವು ಪ್ರಸ್ತುತವಲ್ಲ. ಅಪ್ರಾಪ್ತೆಯನ್ನು ಆಕೆ ತೊಟ್ಟಿದ್ದ ಬಟ್ಟೆಯ ಮೇಲಿಂದ ಸ್ಪರ್ಶಿಸಿದರೂ ಅದು ಪೋಕ್ಸೋ ಕಾಯ್ದೆಯಡಿಯೇ ಅಪರಾಧವೆನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಮುಂಬೈನಲ್ಲಿ ವ್ಯಕ್ತಿಯೋರ್ವ 12ರ ಬಾಲಕಿಯ ಬಟ್ಟೆಯ ಮೇಲೆ ಸ್ತನಗಳನ್ನು ಸ್ಪರ್ಶಿಸುವ ಮೂಲಕ ಬಾಲಕಿಯನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದ. ಇದನ್ನು ವಿರೋಧಿಸಿದ್ದ ಬಾಲಕಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದಳು. ಕಳೆದ ಜನವರಿ 19ರಂದು ಈ ಸಂಬಂಧ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠವು, ಒಬ್ಬ ಅಪ್ರಾಪ್ತೆ ಬಟ್ಟೆ ಧರಿಸಿಕೊಂಡಿದ್ದಾಗ ಆಕೆಯ ಎದೆಯನ್ನು ಯಾರಾದರೂ ಮುಟ್ಟಿದರೆ ಅಥವಾ ಅವರ ಕೈ ಎದೆಗೆ ತಾಗಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೋಕ್ಸೊದ ಸೆಕ್ಷನ್ 7 ರ ಅಡಿಯಲ್ಲಿ ಆರೋಪಿತ ವ್ಯಕ್ತಿಯನ್ನು ಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು.

ಈ ತೀರ್ಪಿನ ವಿರುದ್ಧ ಭಾರತದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಹಾರಾಷ್ಟ್ರ ರಾಜ್ಯವು ಹೈಕೋರ್ಟ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.