ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಪತಿ ಆತ್ಮಹತ್ಯೆಗೆ ಯತ್ನ…

77
firstsuddi

ಆನೇಕಲ್ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೊಬ್ಬ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪತ್ನಿ ಲಾವಣ್ಯ (30) ಳನ್ನು ಪತಿ ಸಂಪತ್ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಡ್ಡ ಬಂದ ಮಗನಿಗೂ ಚಾಕುವಿನಿಂದ ಇರಿದಿದ್ದು, 10 ವರ್ಷದ ಬಾಲಕ ಬಾರ್ಗವ್ ಕೈಗೆ ಗಾಯವಾಗಿದೆ. ಪತ್ನಿ ಕೊಂದ ಬಳಿಕ ಸಂಪತ್ ತಾನೂ ಕತ್ತು ಕುಯ್ದುಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಸಂಪತ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯವಾಗಿರುವುದರಿಂದ ಆತ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಸಂಪತ್ ಹಾಗೂ ಲಾವಣ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲ ದಿನಗಳಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಸಂಪತ್ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನಿನ್ನೆ ಲಾವಣ್ಯಳ ತವರು ಮನೆಯವರು ಬಂದು ರಾಜಿ ಪಂಚಾಯಿತಿ ಮಾಡಿದ್ದರು. ಆದರೆ ಇಂದು ಕೂಡ ಜಗಳ ನಡೆದಿದೆ ಎನ್ನಲಾಗಿದ್ದು, ಪತಿ ಸಂಪತ್ ಪತ್ನಿಯನ್ನು ಹತ್ಯೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.