ಚಿಕ್ಕಮಗಳೂರು: ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಡಿ.ಎಮ್. ಧನಲಕ್ಷ್ಮಿ ಕುಮಾರಿ ಮತ್ತು ಹುಲಿಯಪ್ಪ ಗೌಡ ಕೆ ಅವರ 14 ತಿಂಗಳ ಮಗು ಮನಸ್ಮಿತಾ ಅವರನ್ನು ಕಲಾಂ ವರ್ಲ್ಡ್ ರೆಕಾರ್ಡ್ಸ್ ಅವರು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ತಮ್ಮ ಪುಸ್ತಕದಲ್ಲಿ ನೊಂದಾಯಿಸಿದ್ದಾರೆ ಮತ್ತು ಮಾರ್ಚ್ 3ರಂದು ಟೀಚ್ ಆಡಿಟೋರಿಯಂ ಚೆನ್ನೈನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಅವರು ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ.
ಕೇವಲ 14 ತಿಂಗಳಿಗೆ ಈಕೆ ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಗುವಿನ ತಾಯಿ ಡಿ. ಎಮ್. ಧನಲಕ್ಷ್ಮಿ ಕುಮಾರಿ ಅವರು ಗೃಹಿಣಿಯಾಗಿದ್ದು, ತಂದೆ ಹುಲಿಯಪ್ಪಗೌಡ ಕೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ.

ಮನಸ್ಮಿತಾ ಅವರು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸಂಖ್ಯೆಗಳು, 17 ಹಣ್ಣುಗಳು ಮತ್ತು 26 ತರಕಾರಿಗಳು, 25 ಪಕ್ಷಿಗಳು, 27 ಪ್ರಾಣಿಗಳು, 12 ಕೀಟಗಳು ಮತ್ತು 5 ಸರೀಸೃಪಗಳು, 10 ಸ್ವಾತಂತ್ರ್ಯ ಹೋರಾಟಗಾರರು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂವುಗಳು, 7 ಭಾರತೀಯ ಕರೆನ್ಸಿ, 10 ಬಣ್ಣಗಳು ಮತ್ತು 14 ಆಕಾರಗಳು, 7 ಆಟಿಕೆಗಳ ಹೆಸರುಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು, ಒಟ್ಟು 500 ಪದಗಳನ್ನು ಗುರುತಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಮನಸ್ಮಿತಾ ಅವರನ್ನು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ಶ್ಲಾಘಿಸಲಾಗಿದೆ, ಮಾರ್ಚ್ 3ರಂದು ವಿಶ್ವ ದಾಖಲೆ ಗೌರವ ಸಮಾರಂಭದ ವೇದಿಕೆಯಲ್ಲಿ ದೊಡ್ಡ ಚಪ್ಪಾಳೆಯೊಂದಿಗೆ ಮಗುವನ್ನು ಗೌರವಿಸಲಿದ್ದಾರೆ. ಈ ಸಾಧನೆ ಕಲಾಂ ಅವರ ವಿಶ್ವ ದಾಖಲೆಗಳಲ್ಲಿ ದಾಖಲಾಗಿದೆ.
ಮನಸ್ಮಿತಾ ಅವರ ಈ ಸಾಧನೆಗೆ ಮಾಜಿ ಸಚಿವೆ ಮೋಟಮ್ಮ, ಶಾಸಕರಾದ ನಯನ ಮೋಟಮ್ಮ, ಸೇರಿದಂತೆ ಕಂಬಿಹಳ್ಳಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










