ಚಿಕ್ಕಮಗಳೂರು : ಆಟೋಗಳಿಗೆ ಪರ್ಮಿಟ್ ನೀಡಲು ಜಾರಿಗೆ ಮುಂದಾಗಿರುವ ನೂತನ ಪದ್ಧತಿಯನ್ನು ರದ್ದುಪಡಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

88
firstsuddi

ಚಿಕ್ಕಮಗಳೂರು : ಆಟೋಗಳಿಗೆ ಪರ್ಮಿಟ್ ನೀಡಲು ಪ್ರಾದೇಶಿಕ ಸಾರಿಗೆ ಇಲಾಖೆ ಜಾರಿಗೆ ತರಲು ಮುಂದಾಗಿರುವ ನೂತನ ಪದ್ಧತಿಯನ್ನು ರದ್ದುಪಡಿಸುವಂತೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ಆಟೋ ಚಾಲಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಜಯಪುರ, ಬಾಳೆಹೊನ್ನೂರು, ಹರಿಹರಪುರ ಸೇರಿದಂತೆ ವಿವಿಧ ಊರುಗಳಿಂದ ಬೆಳಿಗ್ಗೆ ವಾಹನಗಳಲ್ಲಿ ನಗರಕ್ಕೆ ಆಗಮಿಸಿದ ನೂರಾರು ಆಟೋ ಚಾಲಕರು ಶೃಂಗೇರಿ ಕ್ಷೇತ್ರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಂತರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶೃಂಗೇರಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಈ ಹಿಂದೆ ಆಟೋಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಪರ್ಮಿಟ್ ನೀಡಲಾಗುತ್ತಿತ್ತು. ಇದೀಗ ಪಟ್ಟಣ ಪಂಚಾಯಿತಿ ಮತ್ತು ಹೋಬಳಿ ವ್ಯಾಪ್ತಿಯಲ್ಲಿ ಪರ್ಮಿಟ್ ನೀಡುವ ಪದ್ಧತಿ ಜಾರಿಗೆ ತರಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದರು.

ನೂತನ ಪದ್ಧತಿ ಬೇರೆ ಜಿಲ್ಲೆಗಳಿಗೆ ಸರಿಯಾಗಬಹುದು. ಆದರೆ ಮಲೆನಾಡು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆಟೋ ಚಾಲಕರು ಮತ್ತು ಮಾಲೀಕರಿಗೆ ಮಾರಕವಾಗುತ್ತದೆ. ನೂತನ ಪದ್ಧತಿಯಿಂದ ಬಾಡಿಗೆ ದೊರೆಯದೇ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ 12 ಸಾವಿರ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಹೇಳಿದರು.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಆಟೋ ಚಾಲಕರು ಮತ್ತು ಮಾಲೀಕರ ಹಿತದೃಷ್ಟಿಯಿಂದ ಅವೈಜ್ಞಾನಿಕವಾಗಿರುವ ನೂತನ ಪದ್ಧತಿಯನ್ನು ಕೈಬಿಟ್ಟು ಹಿಂದಿನ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಮಾತನಾಡಿದ ಆಟೋ ಚಾಲಕರು ಮತ್ತು ಮಾಲೀಕರು ಆಟೋ ಪರ್ಮಿಟ್ ಅವಧಿಯನ್ನು ಎರಡು ವರ್ಷಕ್ಕೆ ಸೀಮಿತಗೊಳಿಸಬಾರದು. ಅದನ್ನು ದೀರ್ಘಕಾಲದ ಅವಧಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಬಾಡಿಗೆ ದೊರೆಯದೇ ಆಟೋ ಚಾಲಕರು ಮತ್ತು ಮಾಲೀಕರ ಬದುಕು ದುಸ್ತರವಾಗಿದೆ. ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ಪರದಾಡುತ್ತಿರುವ ಆಟೋ ಚಾಲಕರಿಗೆ ನೂತನ ಪದ್ಧತಿ ಮರಣಶಾಸನವಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರಾದೇಶಿಕ ಸಾರಿಗೆ ಇಲಾಖೆ ಆಟೋ ಚಾಲಕರು ಮತ್ತು ಮಾಲೀಕರ ಗಮನಕ್ಕೆ ತಾರದೇ ಏಕಾಏಕಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನ್ಯಾಯಾಲಯದ ಆದೇಶದ ಮೇರೆಗೆ ನೂತನ ಪದ್ಧತಿಯನ್ನು ಜಾರಿಗೆ ತರಲಾಗಿದ್ದು ಹತ್ತು ದಿನಗಳ ಒಳಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಚರ್ಚಿಸಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಶೃಂಗೇರಿ ಕ್ಷೇತ್ರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಜಗದೀಶ್, ಉಪಾಧ್ಯಕ್ಷ ವಿಜಯೇಂದ್ರ, ಮೂಡಿಗೆರೆ ತಾಲ್ಲೂಕು ಗೌರವಾಧ್ಯಕ್ಷ ಅಮರ್‍ನಾಥ್, ವಿಜಯ್‍ಕುಮಾರ್, ಸಂಪತ್, ಮಧುಸೂದನ್, ನಾಗರಾಜ್, ಚಂದ್ರಶೇಖರ್, ಶಾಶ್ವತ್, ಸಿದ್ದಿಕ್, ನಾಗರಾಜ್, ಪ್ರೇಮ್, ಮಹಮ್ಮದ್ ಹನೀಫ್, ರಾಜು, ರುದ್ರೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.