ಶಿವಮೊಗ್ಗ : ಸಾಕು ತಂದೆಯೇ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವರದಿಯಾಗಿದೆ.
ಮೊದಲ ಪತ್ನಿಯನ್ನು ಬಿಟ್ಟಿದ್ದ ಸಾಕು ತಂದೆ ಕೂಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ವಿಧವೆಯನ್ನು ಮದುವೆಯಾಗಿದ್ದ. ಎರಡನೇ ಪತ್ನಿಗೆ 12 ವರ್ಷದ ಮಗಳಿದ್ದಳು. ಆ ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣು ಹಾಕಿದ ಆರೋಪಿ, ಪತ್ನಿ ಇಲ್ಲದ ಸಮಯದಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಆರಂಭ ಮಾಡಿದ್ದ. ಅಲ್ಲದೆ ಎದುರು ಮನೆಯ ಯುವಕ ಸಹ ಅಪ್ರಾಪ್ತೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ.
ಸದ್ಯ ಶಾಲೆ ಆರಂಭಗೊಂಡ ಹಿನ್ನಲೆ ಬಾಲಕಿ ಶಾಲೆಗೆ ಬಂದಿದ್ದಾಳೆ. ಈ ವೇಳೆ ಬಾಲಕಿಯಲ್ಲಿನ ಬದಲಾವಣೆಯನ್ನು ಗಮನಿಸಿದ ಶಿಕ್ಷಕಿ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಳೂರು ಪೊಲೀಸರು ಲೈಂಗಿಕ ದೌರ್ಜನ್ಯ ನಡೆಸಿದ ಸಾಕು ತಂದೆ ಹಾಗೂ ಎದುರು ಮನೆ ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.










