ಚಿಕ್ಕಮಗಳೂರು : ಆದಿಶಕ್ತಿನಗರದ ಶಾರದಾ ಮಠದಲ್ಲಿ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಣೆ…

198
firstsuddi

ಚಿಕ್ಕಮಗಳೂರು : ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಜನ್ಮದಿನದ ಪ್ರಯುಕ್ತ ಶ್ರೀಮಠದಲ್ಲಿ ನಸುಕಿನಲ್ಲಿ ವೇದಘೋಷ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ನಂತರ ಧಾರ್ಮಿಕ ವಿಧಿವಿಧಾನಗಳ ನಡುವೆ ಶ್ರೀಮಾತೆ ಶಾರದಾದೇವಿ, ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಮೂಲ ಮಂತ್ರ ಹೋಮ ನಡೆಯಿತು.
ಭಕ್ತರಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ನಾಮಸಂಕೀರ್ತನೆ ಜರುಗಿತು, ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಇದೇ ವೇಳೆ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ಸ್ವಾಮಿ ವಿವೇಕಾನಂದರ ತತ್ವ, ಸಂದೇಶ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿ ಕೊಳ್ಳಬೇಕು, ಅವರ ಸಂದೇಶಗಳು ಎಲ್ಲರ ಬದುಕಿಗೆ ದಾರಿದೀಪವಾಗಬೇಕು ಎಂದು ಸಲಹೆ ಮಾಡಿದರು.
ವಿವೇಕಾನಂದರ ಬದುಕು-ಬರಹ, ಸಂದೇಶ ಮತ್ತು ಆದರ್ಶಗಳ ಕುರಿತು ಪ್ರವಚನ ನೀಡಿದ ಕೆ.ಆರ್.ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ವಿದ್ಯಾಸಾಗರ್ ವೀರ ಸನ್ಯಾಸಿಯ ಜೀವನದ ಮಹತ್ವದ ಘಟನೆಗಳನ್ನು ವಿವರಿಸಿದರು.
ವಿವೇಕಾನಂದರು ವಿಶಾಲ ಹೃದಯಗಳಾಗಿದ್ದರು, ಅವರು ಜೀವಿಗಳ ನೋವನ್ನು ಸಹಿಸುತ್ತಿರಲಿಲ್ಲ, ಮಾತೃ ಹೃದಯಿ ಮತ್ತು ಅತ್ಯಂತ ದಯಾಳುವಾಗಿದ್ದರು ಎಂದರು.
ಜನ್ಮದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ಶ್ರೀಮಠಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು, ಶ್ರೀ ಮಠದ ಅಜಿತಪ್ರಾಣಾ ಮಾತಾಜಿ, ಗೋಪೇಶ ಪ್ರಾಣಾ ಮಾತಾಜಿ, ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ ಹಾಜರಿದ್ದರು.