ಚಿಕ್ಕಮಗಳೂರು : ಕೊರೊನಾ ವಾರಿಯರ್ಸ್‍ಗಳಿಗೆ ಜೀವರಕ್ಷಕ ಪರಿಕರಗಳನ್ನು ವಿತರಿಸಿದ ಯುವಕಾಂಗ್ರೆಸ್…

98
firstsuddi

ಚಿಕ್ಕಮಗಳೂರು : ಕೊರೊನಾ ಮಹಾಮಾರಿಯಿಂದ ಸಾರ್ವಜನಿಕರನ್ನು ರಕ್ಷಿಸಲು ವಾರಿಯರ್‍ಗಳಾಗಿ ದುಡಿಯುತ್ತಿರುವ ತರೀಕೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳಿಗೆ ಜಿಲ್ಲಾ ಯುವಕಾಂಗ್ರೆಸ್ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಜೀವರಕ್ಷಕ ಪರಿಕರಗಳನ್ನು ಇಂದು ವಿತರಿಸಿತು.

ಸ್ಯಾನಿಟೈಸರ್ ಕ್ಯಾನ್ ಗಳು, ಮಾಸ್ಕ್ ಗಳು ಮತ್ತು ಹ್ಯಾಂಡ್ ಗ್ಲೌಸ್ ಗಳನ್ನು ಸಾರ್ವಜನಿಕ ಆಸ್ಪತ್ರೆ ಮತ್ತು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಹಾಗೂ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ವಿತರಿಸಲಾಯಿತು, ಇದರ ಜೊತೆಗೆ ಕೋಡಿಕ್ಯಾಂಪ್ ನ ಬಡ ಕೂಲಿ ಕಾರ್ಮಿಕರಿಗೆ ಪಡಿತರ ಮತ್ತು ತರಕಾರಿ ಕಿಟ್ ಗಳನ್ನು ನೀಡಲಾಯಿತು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಯುವಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಕೊರೊನಾ ಮಹಾಮಾರಿಯ ಎರಡನೇ ಅಲೆ ದೇಶದಲ್ಲಿ ತೀಕ್ಷ್ಣವಾಗಿ ಹರಡಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯಸರ್ಕಾರಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಸೋಂಕು ಎಲ್ಲೆಡೆ ವ್ಯಾಪಕವಾಗಿದ್ದು ಸಾವಿರಗಟ್ಟಲೇ ಜನ ಸಾಯುವಂತಾಗಿದೆ. ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕೊರೊನಾ ಲಸಿಕೆ ಆಕ್ಸಿಜನ್ ಮತ್ತು ಕೋವಿಡ್ ಜೀವರಕ್ಷಕ ಔಷಧಗಳನ್ನು ಕೇಂದ್ರ ಸರ್ಕಾರ ಹೊರ ದೇಶಗಳಿಗೆ ರಫ್ತು ಮಾಡದೇ ಇದ್ದಿದ್ದರೆ ದೇಶದಲ್ಲಿ ಮತ್ತು ರಾಜ್ಯದಲ್ಲಿಂದು ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ ಎಂದು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ವೈದ್ಯರೋರ್ವರು ಅಪಘಾತಕ್ಕೀಡಾಗಿ ರಸ್ತೆ ಬದಿಯಲ್ಲಿ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಅತ್ತ ತಿರುಗಿ ನೋಡದ ಅವರ ಜೀವ ಉಳಿಸಲು ಮುಂದಾಗದ ಸ್ಥಳೀಯ ಶಾಸಕರ ಅಮಾನವೀಯ ವರ್ತನೆ ಜಿಲ್ಲೆಯ ಜನ ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.

ಕೊರೊನಾ ಮಹಾಮಾರಿಯಿಂದ ರಾಜ್ಯದ ಜನತೆ ಜೀವ ಬಿಗಿ ಹಿಡಿದು ಬದುಕುತ್ತಿದ್ದರೆ ಅವರನ್ನು ರಕ್ಷಿಸಬೇಕಾದ ಆಡಳಿತ ಪಕ್ಷದ ಜನಪ್ರತಿನಿಧಿಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿರುವುದು ಜನರ ಬಗ್ಗೆ ಅವರಿಗಿರುವ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎಂ.ಸಂತೋಷ್ ಮಾತನಾಡಿ ತಮ್ಮ ಸ್ವಂತ ಹಣದಿಂದ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಮತ್ತು ಪಡಿತರ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು ನಾಳೆಯಿಂದ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೂ ನೀಡಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕರಾದ ಜಿ.ಹೆಚ್.ಶ್ರೀನಿವಾಸ್, ಟಿ.ಹೆಚ್.ಶಿವಶಂಕರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಹಿಲ್‍ಷರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಯವಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್, ಕಾರ್ಯದರ್ಶಿ ಕೆ.ಚೇತನ್, ಮುಖಂಡರಾದ ಜೆ.ವಿನಾಯಕ, ದೋರನಾಳ್ ಪರಮೇಶ್, ಧರ್ಮರಾಜ್, ಪದ್ಮರಾಜ್, ಸುಧೀರ್ ಮುರೊಳ್ಳಿ, ಶಂಕರ್, ಪ್ರಸನ್ನ, ಧವನ್ ಹಾಜರಿದ್ದರು.